ಶಿಕ್ಷಕರಾಗಿ, ಪರಿಸರ ಪ್ರೇಮಿಯಾಗಿ, ಸ್ನೇಹಕುಂಜದ ಅಧ್ಯಕ್ಷರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯದ ಪ್ರತಿಪಾದಕರಾಗಿದ್ದ ಶ್ರೀ ಎಂ.ಆರ್.ಹೆಗಡೆ.ಹೊಲನಗದ್ದೆ ಇಂದು ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. ತನ್ನ ಸಾವಿನಲ್ಲೂ ಸಮಾಜಕ್ಕೆ ಒಂದು ಆದರ್ಶವಾಗಿರುವ ಅವರು ತನ್ನ ಕಣ್ಣುಗಳನ್ನು ದಾನ ಮಾಡಿ ಇಬ್ಬರು ಅಂಧರಿಗೆ ದೃಷ್ಟಿಕೊಟ್ಟಿದ್ದಾರೆ. ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅನಾರೋಗ್ಯದಲ್ಲಿಯೂ ಜೀವನ ಪ್ರೀತಿಯನ್ನು ಕಾಯ್ದುಕೊಂಡಿದ್ದರು.

ಬದುಕಿನ ಸಂಧ್ಯಾಕಾಲದಲ್ಲಿಯೂ ಕೂಡ ಬತ್ತದ ಅವರ ಉತ್ಸಾಹ , ಸ್ಪೂರ್ತಿ ತುಂಬುವ ಮಾತು, ಕಾರ್ಯದಲ್ಲಿ ಬದ್ಧತೆ, ಕೈ ಶುದ್ಧತೆ ಇತರರಿಗೆ ಮಾದರಿಯಾಗಿದೆ. ತನ್ನ ಕೊನೆಯದಿನಗಳು ಸಮೀಪಿಸುತ್ತಿವೆ ಎಂಬುದನ್ನು ವೈದ್ಯರಿಂದ ಅರಿತಿದ್ದರೂ ತಮ್ಮ ಉತ್ಸಾಹವನ್ನು ಒಂದಿನಿತೂ ಕಳೆದುಕೊಳ್ಳದ ಅವರ ಸ್ಥಿರತೆ, ಸಮಾಜಮುಖಿ ಚಿಂತನೆ ಅದು ಸ್ಥಿತಪ್ರಜ್ಞರಿಗೆ ಮಾತ್ರ ಸಾಧ್ಯ. ಪರಿಸರವನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಅವರು ಪರಿಸರದ ಉಳಿವಿಗಾಗಿ ತೋರಿದ ಬದ್ಧತೆ ಅದು ಅನುಕರಣೀಯ. ಶಿಕ್ಷಕರಾಗಿ ಸ್ನೇಹಕುಂಜದ ಅಧ್ಯಕ್ಷರಾಗಿ , ಅರಣ್ಯ ಸಮಿತಿಯ ಅಧ್ಯಕ್ಷರಾಗಿ, ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಶಿಕ್ಷಣ ಕ್ಷೇತ್ರದ ಕುರಿತು ಅಪಾರ ಕಾಳಜಿ ಹೊಂದಿದ್ದ ಅವರು ಬಡ ವಿದ್ಯಾರ್ಥಿಗಳಿಗೆ ಮಾಡಿದ ಸಹಾಯ , ಹೊಲನಗದ್ದೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಿದ ಪರಿ ಮರೆಯಲಾರದ್ದು. ಸಮಾಜಕ್ಕೆ ಬೆಳಕಾಗಿದ್ದ ಶ್ರೀ ಎಂ.ಆರ್.ಹೆಗಡೆ ಇನ್ನು ನೆನಪು ಮಾತ್ರ. ಆದರೆ ಅವರ ಆದರ್ಶ ನಡೆ,ನುಡಿ ಅದು ಅಜರಾಮರ.
ರವೀಂದ್ರ ಭಟ್ಟ ಸೂರಿ
9448028443

RELATED ARTICLES  ರತ್ನಾಕರರಿಗೆ ನಾಳೆ ನಿತ್ಯೋತ್ಸವ ಪ್ರಶಸ್ತಿ ಪ್ರದಾನ.