ಬೆಂಗಳೂರು: ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿ ಬಿಜೆಪಿ ಅಲ್ಪಸಂಖ್ಯಾತ ಘಟಕ ವಿಜಯೋತ್ಸವ ಆಚರಿಸಿತು. ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಅಲ್ಪಸಂಖ್ಯಾತ ಘಟಕದ ಮಹಿಳಾ ಕಾರ್ಯಕರ್ತೆಯರು ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಮ್ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಪರ ಘೋಷಣೆ ಕೂಗಿದರು. ಸಿಹಿ ಹಂಚಿ ಸಂತಸಪಟ್ಟರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಲ್ಪಸಂಖ್ಯಾತ ಘಟಕದ ಸದಸ್ಯೆ ಶಾಹಿನಾ, ತ್ರಿವಳಿ ತಲಾಖ್ ನಿಂದ ನಮಗೆಲ್ಲಾ ತುಂಬಾ ತೊಂದರೆಯಾಗುತ್ತಿತ್ತು.ಭಯದಲ್ಲೇ ನಾವೆಲ್ಲಾ ಬದುಕು ಸಾಗಿಸುತ್ತಿದ್ದೆವು, ತಲಾಖ್ ಎಂದು ಹೇಳಿ ಗಂಡ ನಮ್ಮನ್ನು ತೊರೆದರೆ ನಮ್ಮ ಜೀವನ ಬೀದಿಗೆ ಬರುತ್ತಿತ್ತು. ತಲಾಖ್ ನಿಂದಾಗಿ ನಮಗೆ ನಮ್ಮದಿಯ ಬದುಕೇ ಇಲ್ಲವಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನಮ್ಮ ಬದುಕಿಗೆ ಭದ್ರತೆ ಕಲ್ಪಿಸಿದಂತಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್ ಹಾಗೂ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ, ಚಿತ್ರ ನಟಿ ಶೃತಿ, ಮಾಜಿ ಸಂಸದೆ ತೇಜಸ್ವಿನಿ ಮುಂತಾದವರು ಉಪಸ್ಥಿತರಿದ್ದರು.