ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಲಗಮವ್ವ ಕಂಕಣವಾಡಿ
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಂಕಣವಾಡಿಗೂ ನಮಗೂ ಯಾವುದೋ ಪೂರ್ವಜನ್ಮದ ನಂಟಿದ್ದಂತೆ ಅನಿಸುವುದು. ನಮ್ಮಕ್ಕ ಸರ್ಕಾರಿ ನೌಕರಿ ಅರಸಿ ಚಿಕ್ಕೋಡಿ ಬಸ್ ಹತ್ತಿದಾಗ ಶ್ರೀಧರ ಸ್ವಾಮಿಗಳನ್ನೇ ಅಪಾರ ಶೃದ್ಧೆಯಿಂದ ನಂಬಿದ ಅವಳಿಗೆ ಸ್ವಾಮಿ ತೋಟ ಎಂಬ ಶಾಲೆ ಸಿಕ್ಕಿತು. ಅವಳಿಗೆ body guard ಆಗಿ ನನಗೂ ಅಲ್ಲಿಗೆ ಹೋಗುವ ಅವಕಾಶ ಬಂದಿದ್ದು. ಆ ವೇಳೆಗಾಗಲೇ ನಾನೂ ಓದು ಮುಗಿಸಿದ್ದರಿಂದ ನನಗೂ ಅಲ್ಲಿಯೇ private convent ನಲ್ಲಿ ಕಲಿಸುವ ಭಾಗ್ಯ ಬಂತು. ಇಡೀ ಊರಿಗೇ ಲ್ಯಾಟ್ರಿನ್ ಕಟ್ಟಿಸಿದ ಮಹಾತ್ಮರಲ್ಲಿ ಹಾಲಪ್ಪಣ್ಣ ಎಂಬವರು ನಮ್ಮನ್ನು ಚೈತನ್ಯಾಶ್ರಮದ ಪಕ್ಕವಿರುವ ಅವರ ಮನೆಯಲ್ಲಿ ವಾಸ್ತವ್ಯಕ್ಕೊಂದು ಅವಕಾಶ ಕಲ್ಪಿಸಿದರು. ಅವರು ಊರಿನ ತಲಾಟೆಯಾಗಿದ್ದು ಹಾಲಪ್ಪಣ್ಣ, ಸಿದ್ದಪ್ಪಣ್ಣ, ಹಾಗೂ ವಿಠ್ಠಲಣ್ಣನವರ ತಾಯಿಯೇ ಈ 90 ವರ್ಷದ ಲಗಮವ್ವ. ನನ್ನ ನೆಚ್ಚಿನ ಆಯಿ.
ನಾನು, ನಮ್ಮ ಅಕ್ಕ ಸಭ್ಯ ಸಜ್ಜನರ ಮನೆಯನ್ನರಸುತ್ತಿದ್ದಾಗ ನಮಗೆ ಸಿಕ್ಕ ಸೌಭಾಗ್ಯ ಇದಾಗಿತ್ತು. ನಾವು ಮನೆಗೆ ಹೋಗಿದ್ದೇ ನಮ್ಮನ್ನು ಮನೆಯವರಿಗಿಂತ ಹೆಚ್ಚಾಗಿ ನೋಡಿಕೊಂಡು ಇಂದಿಗೂ ನಾವು ಬಿಟ್ಟು ಬಂದು 15 ವರ್ಷ ಕಳೆದರೂ ಅದೇ ಪ್ರೀತಿ ಇಟ್ಟುಕೊಂಡಿರುವ ಆಯಿಯ ಬಗ್ಗೆ ನಾಲ್ಕಕ್ಷರ ಬರೆಯಬೇಕೆನಿಸಿತು.
ನಮ್ಮ ರೂಮಿನ ಪಕ್ಕವೇ ಆಯಿಯ ವಾಸ. ಲಗಮವ್ವ ಅವರ ಕಿರಿಯ ಮಗ ವಿಟ್ಠಲ್ ಮತ್ತು ಕಲಾವತಿ ಎನ್ನುವ ಸೊಸೆಯೊಂದಿಗಿದ್ದಾರೆ. ನನ್ನ ಹತ್ತಿರ ಆಗ ಅಕ್ಕ….. ಕ್ರಿಕೆಟ್ ನೋಡುವುದಕ್ಕೆಂದು ತೆಗಿಸಿಕೊಟ್ಟ ಚಿಕ್ಕ black and white ಟಿ.ವಿ.ಇತ್ತು. ಸಂಜೆ ಯಾದರೆ ನಾವು ಒಂದೇ ಕುಟುಂಬದವರಂತೆ ಎಲ್ಲರೂ ಚಾಪೆಯ ಮೇಲೆ ಕುಳಿತು ಸುದ್ದಿ ಹೇಳುತ್ತಾ ಟಿ.ವಿ. ಪ್ರೋಗ್ರಾಂ ನೋಡುತ್ತಿದ್ದೆವು. ಆಯಿಯ ಜೊತೆಗೆ ಕುಳಿತು ಆಯಿಯ ಅನುಭವಗಳನ್ನು ಕೇಳುತ್ತಿದ್ದರೆ ಅದು ನನಗೆ ಪರಮೋಚ್ಚ ಸಂತೋಷ ನೀಡುತ್ತಿತ್ತು. ಆಯಿ ಕುರುಬರವಳು. ತೀರಾ ಸಣ್ಣ ವಯಸ್ಸಿಗೇ ಮದುವೆಯಾದ ಲಗುಮವ್ವ ಕುರಿ ಕಾಯುತ್ತಾ ಕಷ್ಟಪಟ್ಟ ದಿನಗಳನ್ನು ನೆನೆಸಿಕೊಂಡರೆ ನನಗೆ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
ಆಯಿ ಒಂದು ತರಹ encyclopedia ಇದ್ದ ಹಾಗೆ. ಅವಳಿಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಅನುಭವಗಳೇ ಅವಳಿಗೆ ಅಷ್ಟೊಂದು ಪಾಠ ಕಲಿಸಿದ್ದು. ಆಯಿಯ ಕಾಲುಗಳು ಅಷ್ಟಷ್ಟು ದಿನಕ್ಕೆ ಬೀಗಿಕೊಳ್ಳುತ್ತಿದ್ದವು. ಆದರೂ ಆಯಿ ಪಾತ್ರೆ ತೊಳೆಯುವ ತನ್ನ ಕಾಯಕವನ್ನೆಂದೂ ಬಿಡುತ್ತಿರಲಿಲ್ಲ. ನನ್ನನ್ನು ಕಂಡರೆ ಆಯಿಗೆ ಎಲ್ಲಿಲ್ಲದ ಪ್ರೀತಿ. ಆಯಿಗೆ ಹತ್ತಾರು ಮೊಮ್ಮಕ್ಕಳಿದ್ದರೂ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದಂತೆ ದೂರದಿಂದಲೇ ಕೂಗಿ ಕರೆಯುತ್ತಿದ್ದಳು. ತಲೆ ನೇವರಿಸಿ ನನ್ನನ್ನು ಆಧರಿಸುತ್ತಿದ್ದಳು. ತಬ್ಬಿಕೊಂಡು ಸಾಂತ್ವನ ಹೇಳುತ್ತಿದ್ದಳು. ಯಾವ ಜನುಮದ ಪುಣ್ಯವೋ ಎಂಬ ಭಾವ ನನ್ನನ್ನು ಸದಾ ಆವರಿಸುತ್ತಿತ್ತು.
ಅತಿಶಯೋಕ್ತಿಯಾಗಿ ಹೊಗಳಿ ಲಗಮವ್ವನಿಂದ ಗಿಟ್ಟಿಸಿಕೊಳ್ಳಬೇಕಾದ್ದು ನನಗೇನೂ ಇಲ್ಲ. ನಾನು ಬರೆದಿದ್ದನ್ನು ಅವಳಿಗೆ ಓದಲಿಕ್ಕೂ ಬರುವದಿಲ್ಲ. ಆದರೂ ನನ್ನ ಸಂತೋಷ ಹಾಗೂ ಕೃತಜ್ಞತೆಯ ಭಾವಕ್ಕಷ್ಟೇ ನಾನು ಬರೆಯಬೇಕು.
ಆಯಿ ಇಳಕಲ್ ಸೀರೆ ಉಟ್ಟುಕೊಂಡು ಮುದ್ದಾಗಿ ಕಾಣುತ್ತಾಳೆ. ನಮ್ಮಿಬ್ಬರನ್ನೂ ಸ್ವಂತ ಮೊಮ್ಮಕ್ಕಳಿಗಿಂತ ಹೆಚ್ಚಾಗಿ ಕಂಡ ಆಯಿ ನಮಗಾಗಿ ರೊಟ್ಟಿ ಪಲ್ಯ ತಂದು ಕೊಟ್ಟ ದಿನಗಳದೆಷ್ಟೋ. ಸುಮಾರು 400 ಕಿ.ಮೀ ದೂರದಲ್ಲಿದ್ದರೂ ಅನಾರೋಗ್ಯದ ನಡುವೆಯೂ ಆಯಿ ನಮ್ಮಿಬ್ಬರ ಮದುವೆಗೆ ಬಂದು ಹರಸಿ ಹೋದರು.
ನಡೆದಾಡುವ ದೇವರಂತೆ ಕಾಣುತ್ತಾರೆ ಆಯಿ ನನಗೆ. ಅವರ ಮಮತೆ, ಉತ್ಸಾಹ, ಕಾಳಜಿ, ಅನುಭವ ಪೂರಿತ ಮಾತುಗಳು ಎಂಥವರಿಗೂ ಸ್ಫೂರ್ತಿ ತುಂಬುತ್ತವೆ. ಒಂದೇ ಪ್ರದೇಶದಲ್ಲಿ ಹುಟ್ಟಿ ಬೆಳೆದು ವೃದ್ಧಾಪ್ಯದ ಅಂಚಿನಲ್ಲಿರುವ ಕಾಲಕ್ಕೂ ಆಯಿಯಂಥವರ ಬದುಕು ಸರಳ ಸುಂದರ ಅಂಕಲಿಪಿಯಿದ್ದಂತೆ. ಅವಳಿಗೆ ಯಾವುದೇ ಪ್ರಶಸ್ತಿ, ಪ್ರತಿಷ್ಠೆ, ಬಂಗಾರ, ಹಣದ ಆಕಾಂಕ್ಷೆಯಿಲ್ಲ. ಬಂಗಾರದಂತಹ ಮಕ್ಕಳಿರುವಾಗ ಸಂಸಾರದ ತಾಪತ್ರಯವೂ ಇಲ್ಲ. ಹಾಗಂತ ಆಯಿ ಕುಳಿತು ಉಂಡವಳಲ್ಲ.
ಆಯಿಯ ಹಾಡು, ಹಾಸ್ಯ, ಗಾದೆ, ಬೈಗುಳದ ಮಾತುಗಳು ಪ್ರತಿಯೊಂದೂ ನೆನಪಾಗುತ್ತವೆ. ಆಯಿಯ ಕಾಲಿಗೆರಗಿದರೆ ಆಯಿ…….ಅಯ್ಯೋ…… ನನ್ನಪ್ಪಾ…..ಎಂದು ನನ್ನನ್ನು ಎಬ್ಬಿಸುವ ಪರಿ ಕಣ್ಮುಂದೆ ಬರುತ್ತದೆ.
ಸಂಬಂಧಗಳು ಜಾತಿಯಿಂದ ಬೆಸೆಯಲ್ಪಡುವುದಿಲ್ಲ. ನೀತಿಯಿಂದ ಬೆಸೆಯಲ್ಪಡುತ್ತದೆ. ರೀತಿಯಿಂದ ಬೆಸೆಯಲ್ಪಡುತ್ತದೆ. ಕುರುಬರ ಲಗಮವ್ವ ನನಗೆ ಯಾವತ್ತೂ ಬೇರೆಯೆನಿಸಲಿಲ್ಲ. ಅವಳ ನಿಷ್ಕಲ್ಮಷ ಮಮತೆ ಮರೆಯುವಂತಹುದೇ ಅಲ್ಲ. ಇಂದೂ ದೂರವಾಣಿಯ ಮೂಲಕ ಆಗಾಗ ಮಾತನಾಡುವ ಆಯಿಯ ಬಗ್ಗೆ ನಾಲ್ಕು ಅಕ್ಷರ ಬರೆದು ಧನ್ಯನಾದೆ.
ಗಂಡನನ್ನು ಬೇಗನೇ ಕಳೆದುಕೊಂಡರೂ ಧೈರ್ಯಗುಂದದೇ ಮಕ್ಕಳನ್ನು ಬೆಳೆಸಿದ ಲಗಮವ್ವನದು ತುಂಬು ಕುಟುಂಬ. ಮಕ್ಕಳು, ಮೊಮ್ಮಕ್ಕಳು, ಮಿಮ್ಮಕ್ಕಳು ಸೇರಿ ನಮ್ಮೂರ ಶಾಲೆಗಿಂತ ಹೆಚ್ಚು ಜನರಿದ್ದಾರೆ ಅಲ್ಲಿ.??.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಆಯಿಗೆ ನೂರು ವರ್ಷ ದಾಟಿಸುವ ಶಕ್ತಿ ಕೊಡಲಿ. ಅವಳಿಗೆ ಅವಳ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಲಗಮವ್ವನಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ