ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಕೃಷ್ಣಮೂರ್ತಿ ಹೆಬ್ಬಾರ

ಕೆಚ್ಚೆದೆಯ ಧೀಮಂತ ಪತ್ರಕರ್ತ.. ಬೇಡದ, ಕಾಡದ ಪ್ರಾಮಾಣಿಕ ಬರಹಗಾರ, ಮಾನವೀಯ ಸಂವೇದನೆಯ ಸೂಕ್ಷ್ಮಮತಿ, ಸೃಜನಶೀಲ ಸಾಹಿತಿ, ಸ್ಫೂರ್ತಿಯ ಗಣಿ, ಅದ್ಭುತ ವಾಗ್ಮಿ, ಅಸಾಮಾನ್ಯ ನೆನಪಿನ ಶಕ್ತಿ ಹೊಂದಿದ ಪ್ರೀತಿಯ ಹೆಬ್ಬಾರಣ್ಣ ನನ್ನ ಇಂದಿನ ಅಕ್ಷರ ಅತಿಥಿ. ಸಾವಿರ ಸಾವಿರ ಜನರ ಬಗೆಗೆ ಮೆಚ್ಚುಗೆಯಿಂದ ಬರೆವ ಹೆಬ್ಬಾರಣ್ಣನ ಬಗೆಗೂ ನಾಲ್ಕಕ್ಷರ ಬರೆದು ಲೇಖನಿ ಧನ್ಯತಾ ಭಾವ ತಾಳಬೇಕು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ವಾಸವಾಗಿರುವ ಶ್ರೀ ಕೃಷ್ಣಮೂರ್ತಿ ಹೆಬ್ಬಾರ ‘ನಾಗರಿಕ’ ಪತ್ರಿಕೆಯ ಸಂಪಾದಕರು. ನಾಡಿನಲ್ಲಿ ಮನೆಮಾತಾದ ಅಸಾಮಾನ್ಯ ಬರಹಗಾರ ಇಂದಿಗೂ ಸಾಮಾನ್ಯನಂತೆ ಬದುಕುವುದೇ ವಿಶೇಷ. ಮಾಡಿದರೆ ಎಷ್ಟೂ ದುಡ್ಡು ಮಾಡಬಹುದಿತ್ತು. ತಂದರೆ ಪ್ರಶಸ್ತಿಗಳ ಮೂಟೆಯನ್ನೇ ಹೊತ್ತು ತರಬಹುದಿತ್ತು. ಆದರೆ ಕೆಲಸವೊಂದನ್ನೇ ಶೃದ್ಧೆಯಿಂದ ಮಾಡುವ ಹೆಬ್ಬಾರಣ್ಣನದು ನೇರನುಡಿ.

‌‌‌‌‌‌‌ ಓದಿಸಿಕೊಂಡು ಹೋಗುವ ಹೆಬ್ಬಾರಣ್ಣನ ಬರಹಗಳಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅದೆಷ್ಟೋ ವರ್ಷಗಳ ಹಿಂದೆಯೇ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಹೆಬ್ಬಾರಣ್ಣ ಕಥೆ, ನಾಟಕ, ಲೇಖನ, ವಿಮರ್ಶೆ, ಹೀಗೆ ಸಾಹಿತ್ಯದ ವಿವಿಧ ಮಜಲುಗಳಲ್ಲೂ ಕೈಯಾಡಿಸಿದವರು. ಓದುಗರೇ ಇಲ್ಲ ಎನ್ನುವ ಕಾಲಕ್ಕೂ ನಾಗರಿಕ ಪತ್ರಿಕೆಯನ್ನು ಮೂರ್ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವವರು.
‌‌‌‌‌‌‌ ವಿಭಿನ್ನ ಯೋಚನೆ ನಮ್ಮ ಹೆಬ್ಬಾರಣ್ಣನದು. ಇದು ಸುಳ್ಳು ಸುದ್ದಿ, ಕೃಷ್ಣನ ಕೈಫಿಯತ್ತು ಮುಂತಾದ ಅವನ ಅಂಕಣ ಬರಹಗಳು ಜನಮಾನಸದಲ್ಲಿ ಅಚ್ಚೊತ್ತಿಬಿಟ್ಟಿವೆ. ಹಿರಿಯರನ್ನು, ಕಿರಿಯರನ್ನು ಸಮಾನವಾಗಿ ಗೌರವಿಸುವ ಹೆಬ್ಬಾರಣ್ಣ ಹಲವರಿಗೆ ಅಚ್ಚುಮೆಚ್ಚು.
ಅವನನ್ನು ಹುಡುಕಿಕೊಂಡು ಮಂತ್ರಿ ಮಹೋದಯರೇ ಬರಲಿ…ಅಥವಾ ಯಾವುದೋ ಒಬ್ಬ ಸಾಮಾನ್ಯ ವ್ಯಕ್ತಿಯೇ ಬರಲಿ…. ಹೆಬ್ಬಾರಣ್ಣನ ನಡೆ ನುಡಿ ಬದಲಾಗುವುದಿಲ್ಲ. ಯಾರಿಗೂ ಜಗ್ಗದ, ಸೊಪ್ಪು ಹಾಕದ ಹುಂಭು ಧೈರ್ಯದ ಮನುಷ್ಯ ನಮ್ಮ ಹೆಬ್ಬಾರಣ್ಣ. ನಿನ್ನನ್ನು ಹಾಗೆ ಮಾಡುತ್ತೇನೆ…ಹೀಗೆ…ಮಾಡುತ್ತೇನೆ….ಎಂದವರೆಲ್ಲ ಎಲ್ಲೋ ಹೋದರು…ನಾನು ಮಾತ್ರ ಮಾಡುವ ಕೆಲಸ ಮಾಡುತ್ತಲೇ ಇದ್ದೇನೆ ಎಂದು ನಗುತ್ತ ಹೇಳುವ ಹೆಬ್ಬಾರಣ್ಣ ಹೃದಯವಂತ.
ಹೆಬ್ಬಾರಣ್ಣನ ಬಗ್ಗೆ ನಾನು ಬರೆದು ಆತ ದೊಡ್ಡವನೆಂದು ಪರಿಚಯಿಸುವ ಇರಾದೆ ನನ್ನದಲ್ಲ. ನನಗಿಂತ ಚೆನ್ನಾಗಿ ಅವನನ್ನು ಹತ್ತಿರದಿಂದ ಬಲ್ಲ ಸಾವಿರಾರು ವಿ.ಐ.ಪಿ ಗಳು ಅವನ ಜೊತೆಗೆ ಇದ್ದಾರೆ. ಆದರೆ ನಾನೂ ಬರಹದ ಮೂಲಕವೇ ಬರಹಗಾರ ಹೆಬ್ಬಾರಣ್ಣನಿಗೆ ಕೃತಜ್ಞತೆ ಹೇಳಬೇಕೆನಿಸಿತು.
ಹೆಬ್ಬಾರಣ್ಣನ ಮಾತುಗಳು ನೈಜ ಮತ್ತು ಸರಳ. ಗಂಟೆಗಟ್ಟಲೆ ಮಾತಾಡಿದರೂ ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಅವನಲ್ಲಿದೆ. ಅವನ ಜೊತೆಗೆ ಸಂದೇಶ ಮಂಟಪ ಹರಟೆ ತಂಡದ ಸದಸ್ಯನಾಗಿ ತಿರುಗಿದ ನನಗೆ ಅವನೊಬ್ಬ ಸ್ಫೂರ್ತಿ. ಚಿಕ್ಕವನಿರುವಾಗ ನಾನು ಹೆಬ್ಬಾರಣ್ಣನ ಆಫೀಸಿನ ಬಾಗಿಲಿಗೆ ಚಿಕ್ಕ ಲೇಖನ ಹಿಡಿದು ಹೋಗಿದ್ದೆ. ಆತ ನನ್ನನ್ನು ಮಾರ್ಗದರ್ಶಿಸಿ ಹಿಂದೆ ಕಳುಹಿಸಿಬಿಟ್ಟ. ಮತ್ತೆ ಬರೆದೆ….ಮತ್ತೆ ಬರೆದೆ. ನಂತರ ನನ್ನನ್ನು ಅವನು ಹುರಿದುಂಬಿಸಿದ ರೀತಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತು.
ಹೆಬ್ಬಾರಣ್ಣನ ತಲೆಯಲ್ಲಿ ನೂರಾರು ಕವಿತೆಗಳು print ಆಗಿಯೇ ಇವೆ. ಯಾವುದಾದರೊಂದು ಕವಿತೆ ಇಷ್ಟವಾದರೆ ಅದು ಅವನಿಗೆ ಕಂಠಸ್ಥವಾಗಿ ಬಿಡುತ್ತದೆ. ಇಷ್ಟವಾದ ಕವಿಗಳ, ಸಾಹಿತಿಗಳ ಮನೆಗೇ ತೆರಳಿ ಅವರ ಕಷ್ಟಗಳಿಗೂ ಸ್ಪಂದಿಸುವ ಹೆಬ್ಬಾರಣ್ಣ ನಿಜಕ್ಕೂ ಮಾದರಿ ಮನುಷ್ಯ. ನಿಯತವಾದ ವ್ಯಾಯಾಮ, ಸಮಯಪಾಲನೆ, ನಿರಂತರ ಓದು, ಅಪ್ಪ, ಅಮ್ಮನ ಮೇಲಿನ ಕಾಳಜಿ ಶೃದ್ಧೆ, ಗುರುಗಳ ಮೇಲಿನ ಭಕ್ತಿ ಹೀಗೆ ಪ್ರತಿಯೊಂದರಲ್ಲೂ ಹೆಬ್ಬಾರಣ್ಣ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ.
ಎದೆಯುಬ್ಬಿಸಿ ಹೆಬ್ಬಾರಣ್ಣ ನಡೆದುಕೊಂಡು ಹೋಗುತ್ತಿದ್ದರೆ ಅವನ ನೈತಿಕ ಸ್ಥೈರ್ಯದ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ಪಕ್ಷಗಳಿಗಂಟಿಕೊಳ್ಳದ ಹುಳುಕು, ಕೊಳಕುಗಳಿಲ್ಲದ ವ್ಯಕ್ತಿ ಶ್ರೀ ಕೃಷ್ಣಮೂರ್ತಿ ಹೆಬ್ಬಾರ. ಅವನೊಮ್ಮೆ ಸಾಹಿತ್ಯ ಸಮ್ಮೇಳನದ ರೂವಾರಿಯಾಗಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಿದಾಗ ಮುಲಾಜಿಲ್ಲದೇ ಸಮಯಪಾಲನೆ ಮಾಡಿದ ರೀತಿ ಮಾತ್ರ ಅಮೋಘವಾದದ್ದು. ನನ್ನ ಮೇಲೆ ಕಾಳಜಿಯ ಕಣ್ಣುಗಳನ್ನಿರಿಸಿದ ಹೆಬ್ಬಾರಣ್ಣನಿಂದ ಕಲಿಯುವುದು ತುಂಬಾ ಇದೆ. ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಸ್ವೀಕರಿಸಿದ ಹೆಬ್ಬಾರಣ್ಣನ ಬಗ್ಗೆ ಬರೆದು ಮನಸ್ಸು ಆರ್ದ್ರಗೊಂಡಿತು. ಕಣ್ಣು ತೇವವಾಯಿತು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಹೆಬ್ಬಾರಣ್ಣ ಹಾಗೂ ಅವನ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಇಂದಿನ ಅಡಿಕೆ ಧಾರಣೆಗಳು

ಹೆಬ್ಬಾರಣ್ಣನಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ