ಇಂದ ,ಚಿದಾನಂದ ಹರಿ ಭಂಡಾರಿ
ಅಂಚೆ ,ಕಾಗಾಲ.
ತಾಲೂಕು,ಕುಮಟಾ.
ಜಿಲ್ಲೆ, ಉತ್ತರಕನ್ನಡ.
ಕರ್ನಾಟಕ ರಾಜ್ಯ.
ದೂರವಾಣಿ.8979612257

ಗೌರವಾನ್ವಿತ ಮೋದಿಜೀ ,
ಸಪ್ರೇಮ ನಮಸ್ಕಾರಗಳು..

ಪ್ರಿಯ ಪ್ರಧಾನಮಂತ್ರಿಯವರೇ ದೇಶವ್ಯಾಪಿ ಲಾಕ್ ಡೌನ್ ಇವರುವ ಸಂದರ್ಭದಲ್ಲಿ ರಾಷ್ಟ್ರದ ಹಿತಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ಈ ಬಹಿರಂಗ ಪತ್ರದಮೂಲಕ ತಮ್ಮ ಬಳಿ ನಿವೇದಿಸಿಕೊಳ್ಳುತಿದ್ದೇನೆ.

ಸಾರ್ವಜನಿಕ ಕ್ಷೇತ್ರದಲಿ ರಾಜಕಾರಣಿಯಾಗಿ ರಾಜರ್ಷಿಯ ಹಾಗೆ ಕಾಣುವ ತಾವು ಗುಜರಾತ ರಾಜ್ಯವನ್ನು ಹಲವಾರು ವರುಷಗಳ ಕಾಲ ಸಮರ್ಥವಾಗಿ ಆಳಿ ಹೆಸರು ಮಾಡಿದಿರಿ.
ಆ ಹೆಗ್ಗಳಿಕೆಯೇ ತಮ್ಮನ್ನು ದೇಶದ ಪ್ರಧಾನಮಂತ್ರಿಯ ಸ್ಥಾನಕ್ಕೆ ಏರಿಸಿತು ಎಂದರೆ ತಪ್ಪಾಗಲಾರದು.ಯಾರೂ ಊಹಿಸಲು ಸಾಧವಿಲ್ಲದ ಹಾಗೆ ಪ್ರಚಂಡ ಬಹುಮತವನ್ನು ತಮ್ಮ ಪಕ್ಷಕ್ಕೆ ತಂದು ಕೊಟ್ಟಿದಿರಿ ರಾಜಕೀಯವಾಗಿ ತಮ್ಮನ್ನು ವಿರೋಧಿಸುವವರೆಲ್ಲ ಫಲಿತಾಂಶ ಬಂದ ಬಳಿಕ ಇಂಗುತಿಂದ ಮಂಗನ ಹಾಗೆ ಜನರಕಣ್ಣಿಗೆ ಗೋಚರಿಸಿದ್ದು ಸತ್ಯ.
ದೇಶದ ಪ್ರಧಾನಿಯಾಗಿ ತಾವು ತೆಗೆದುಕೊಂಡ ಕೆಲವು ನಿರ್ಧಾರಗಳು ಐತಿಹಾಸಿಕ ಎನಿಸಿತು.ಭಾರತ ವಿಶ್ವದ ಗಮನಸೆಳೆಯಿತು.ಮೊದಲ ಐದು ವರ್ಷದ ಅವಧಿ ಸುಲಲಿತವಾಗಿ ಕಳೆದು ನಂತರದ ಚುನಾವಣೆಯಲ್ಲಿ ಎದುರಾಳಿಗಳಿಗೆ ನಿಮ್ಮ ವಿರುದ್ಧ ಮಾತಾಡಲು ವಿಷಯಗಳೇ ಸಿಗದಾಯ್ತು.
ನಿಮ್ಮನ್ನು ಕಂಡಕಂಡ ಕಡೆಗಳಲ್ಲಿ ಕಳ್ಳ ಕಳ್ಳ ಎಂದವರನ್ನು ಜನತೆಯೇ ಮಳ್ಳ ,ಮಳ್ಳ ಎಂದು ಸಾರಾಸಗಟಾಗಿ ತಿರಸ್ಕಾರ ಮಾಡಿತು.ನಿಮ್ಮ ನಾಮದ ಬಲದಿಂದ ಅನೇಕರು ಸಂಸತ್ತಿನ ಒಳಗಡೆ ಪ್ರವೇಶ ಪಡೆದರು.ತಾವು ಪ್ರಧಾನಿ ಆದರೆ ದೇಶ ಬಿಡುವೆ,ರಾಜಕೀಯ ದಿಂದ ಸನ್ಯಾಸ ತೆಗೆದುಕೊಳ್ಳುವೆ ಎಂದವರೆಲ್ಲ ಸುಳ್ಳೇ ತಮ್ಮ ಮನೆಯ ದೇವರು ಎಂಬುದನ್ನು ಸಾಬೀತು ಮಾಡಿದರು.

ಸೂರಿಲ್ಲದವರಿಗೆ ಸೂರು ನೀಡಿದಿರಿ. ಬೆಳಕಿಲ್ಲದ ಊರಿಗೆ ಬೆಳಕು ನೀಡಿದಿರಿ ಬಡ ತಾಯಂದಿರು ಹೊಗೆಯಲ್ಲಿ ಅಡುಗೆ ಬೇಯಿಸಿ ಅರ್ಧ ಆಯಸ್ಸಿಗೆ ತಮ್ಮ ಜೀವಕ್ಕೆ ಕಂಟಕ ಉಂಟುಮಾಡಿ ಕೊಳ್ಳುವುದನ್ನು ತಪ್ಪಿಸಲು ಉಜ್ವಲ ಅನಿಲ ಯೋಜನೆಯನ್ನು ಜಾರಿಮಾಡಿ ಆ ತಾಯಂದಿರ ಪಾಲಿನ ಆಶಾಕಿರಣವಾದಿರಿ.ರೈತರಪಾಲಿಗೆ ಸಹಾಧನ ನೀಡಿದಿರಿ.ನಿರೋಗ ಭಾರತಕ್ಕಾಗಿ ಆಯುಷ್ಮಾನ್ ಜಾರಿಗೊಳಿಸಿರುವಿರಿ.ಬಾಲೆಯರ ಪಾಲಿನ ಸುಕನ್ಯಾ ಸಮೃದ್ಧಿ ಯೋಜನೆ,ಬೇಟಿಬಚಾವೋ ಬೇಟಿ ಪಡಾವೋ ಮೊದಲಾದ ನಿಲುವುಗಳು ಸ್ತುತ್ಯಾರ್ಹ. ರಾಷ್ಟ್ರಪಿತನ ನೆನಪಿನಲ್ಲಿ ಸ್ವಚ್ಛ ಭಾರತ ಯೋಜನೆ, ರಾಷ್ಟ್ರಕಂಡ ಹೆಮ್ಮೆಯ ನೇತಾರ ಸರದಾರ ವಲ್ಲಭಭಾಯಿ ಪಟೇಲರ ವಿಶ್ವ ದಾಖಲೆಯ ಪ್ರತಿಮೆ ಯನ್ನು ಗುಜರಾತದಲ್ಲಿ ನಿರ್ಮಿಸಿದಿರಿ ಭಕ್ತಿಭಂಡಾರಿ ಬಸವಣ್ಣನ ಪ್ರತಿಮೆ ಲಂಡನನಲ್ಲಿ ಸ್ಥಾಪನೆಗೊಳಿಸಿದಿರಿ ಒಂದೇ ಎರಡೇ ಮೋದಿಜೀ ನಿಮ್ಮ ಜನಪರ ಕಾರ್ಯಗಳ ಕುರಿತು ಬರೆಯುವುದೂ ಒಂದು ಸವಾಲಿನ ಕಲಸವೇ ಸರಿ.

ರಾಷ್ಟ್ರ ಹಿತದ ಬಗ್ಗೆ ತಮ್ಮ ಕಟಿಬದ್ಧತೆ ಪ್ರಶ್ನಾತೀತ.ನೋಟು ಅಮಾನ್ಯೀಕರಣ ಬಂಗಾಳದ ಗಡಿಯ ವಿಷಯ .ಸರ್ಜಿಕಲ್ ದಾಳಿ,ಅಂತರಾಷ್ಟ್ರೀಯ ವೇದಿಕೆಯಲಿ ಪಾಕಿಸ್ಥಾನಕ್ಕೆ ಮಣ್ಣುಮುಕ್ಕಿಸಿದ್ದು ಈ ಜನ್ಮದಲ್ಲಿಯೇ ಸಾಧ್ಯ ಇಲ್ಲವೇ ಇಲ್ಲ ಎಂಬ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನ ಕಿತ್ತೊಗೆದು ಅದನ್ನು ರಾಷ್ಟ್ರದ ಇತರ ರಾಜ್ಯಗಳಿಗೆ ಸಮಾನ ಗೊಳಿಸಿದ ಕಾರ್ಯವಂತೂ ಜನಕನ ಆಸ್ಥಾನದಲ್ಲಿ ಶ್ರೀರಾಮಚಂದ್ರ ಶಿವಧನಸ್ಸನ್ನು ಎತ್ತಿದ ಹಾಗೇ ಅನಿಸಿತು ಈ ವಿಷಯದಲ್ಲಿ ನಿಮಗೆ ನೀವೇಸರಿಸಾಟಿ ಮೋದೀಜಿ.
ಈ ನಡುವೆ ಹಲವಾರು ವರುಷಗಳಿಂದ ನೆನಗುದಿಗೆ ಬಿದ್ದ ರಾಷ್ಟ್ರದ ಅಸ್ಮಿತೆಯ ಪ್ರಶ್ನೆಯಾದ ರಾಮಮಂದಿರದ ವಿವಾದದ ಅಂತಿಮ ನಿರ್ಣಯ ಸತ್ಯದ ಪರವಾಗಿ ಬಂದು ಅಯೋಧ್ಯೆಯಲ್ಲಿ ಭವ್ಯಮಂದಿರದ ಬಹುಕಾಲದ ಕನಸನ್ನು ಭಗವಂತ ನಿಮ್ಮ ಅವಧಿಯಲ್ಲಿ ನನಸಾಗಿಸುತ್ತಿರುವುದನ್ನು ಗಮನಿಸಿದರೆ ತಮ್ಮನ್ನು ಪುಣ್ಯ ಪುರುಷ ಎಂದೇ ದೇಶದ ಆಸ್ತಿಕ ಪ್ರಪಂಚ ಕೊಂಡಾಡುತ್ತಿರುವುದು ಖಂಡಿತ ಉತ್ಪ್ರೇಕ್ಷೆ ಅನಿಸುವುದಿಲ್ಲ.
ಪೌರತ್ವ ಕಾಯಿದೆಗೆ ತಂದ ತಿದ್ದುಪಡಿಯಿಂದ ದೇಶದ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುವಲ್ಲಿ ಸಹಕಾರಿ ಆಗಲಿದೆ ಎಂಬುದು ಎಲ್ಲರ ನಂಬಿಕೆ.
ತ್ರಿವಳಿ ತಲಾಕ್ ನಿಷೇಧದ ತೀರ್ಮಾನವು ಮುಸ್ಲಿಂ ಧರ್ಮದ ಮಾತೆಯರ ಬದುಕಿನ ಅತಂತ್ರತೆಯನ್ನು ತಡೆಯುವಲ್ಲಿ ಕೈಗೊಂಡ ಮಹತ್ವದ ತೀರ್ಮಾನ ಎಂದೇ ಬಗೆಯಲಾಗಿದೆ.
ಇನ್ನು ಭಾರತದಲ್ಲಿ ವಾಸಿಸುವ ಎಲ್ಲರೂ ಒಂದೇ ಎನ್ನುವಂತಾಗಬೇಕಿದೆ.
ಕನ್ನಡದ ಆದಿಕವಿ ಪಂಪನ ಆಶಯದಂತೇ ” ಮಾನವ ಜಾತಿ ತಾನೊಂದೇ ವಲಂ
ಎಂಬ ಹಾಗೆ ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಆಗುವ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ.ಆ ತಾಕತ್ತು ನಿಮ್ಮನ್ನು ಬಿಟ್ಟು ಮತ್ಯಾರಿಗಿದೆ ಹೇಳಿ? ಅದೊಂದು ಜ್ಯಾತ್ಯಾತೀತ ಭಾರತಕ್ಕೆ ಅತೀ ಅವಶ್ಯವಾದ ಕಾನೂನು.

ಹೀಗೇ ತಮ್ಮ ಆಳ್ವಿಕೆಯಲ್ಲಿ ಭಾರತ ವಿಶ್ವಗುರು ಎನಿಸಿಕೊಳ್ಳುವ ದಿನ ಹತ್ತಿರ ಆಗುತ್ತಿದೆ ಎಂದು ಭಾವಿಸಿಕೊಳ್ಳುವ ವೇಳೆಯಲ್ಲಿ ಕೊರೊನಾ ಎಂಬ ಮಹಾಮಾರಿ ವಿಶ್ವವನ್ನು ಆವರಿಸಿ ಜನಜೀವನವನ್ನು ಸ್ತಬ್ದಗೊಳಿಸಿದೆ.ಮನಕುಲವನ್ನು ಬಹಳ ಭಯಾನಕವಾಗಿ ಕಾಡಿದ ಈ ಮಾರಿ ಭಾವನಾತ್ಮಕ ಬದುಕಿಗೆ ಹೆಸರಾದ ವಿಶಾಲ ಭಾರತಕ್ಕೂ ಆವರಿಸಿ ಮುಂದೇನು ಮುಂದೇನು ಎಲ್ಲರೂ ಚಿಂತೆಗೊಳಗಾದಾಗ ಬಹುತೇಕ ಜನರುಗಳಿಗೆ ಅರ್ಜುನ ವಿಷಾದಯೋಗ ಕ್ಕೆ ಔಷಧ ನೀಡಿದ ಶ್ರೀಕೃಷ್ಣ ನ ಹಾಗೆ ದೇಶದ ಭರವಸೆಯ ಬೆಳಕಾಗಿ ನೀವು ಕಾಣುತ್ತಿರುವಿರಿ. ನಿಮ್ಮ ಸ್ಥಾನದಲ್ಲಿ ಇನ್ಯಾರೋ ಇದ್ದರೆ ಇಂದು ಈ ದೇಶದ ಗತಿ ಎತ್ತ ಸಾಗುತಿತ್ತೋ ಏನೋ? ಊಹಿಸಿದರೆ ಮೈನಡುಗುತ್ತದೆ.

ಆರ್ಥಿಕವಾಗಿ ದೇಶ ಬಹಳ ನಷ್ಟ ಅನುಭವಿಸಿದರೂ ಹೆದರದಿರಿ ಎಂದು ಧೈರ್ಯ ತುಂಬುತ್ತಿರುವ ನೀವು ದೇಶವಾಸಿಗಳ ಭರವಸೆಯ ಬೆಳಕು.

ಲಾಕ್ ಡೌನ್ ನಂತಹ ಈ ಕಷ್ಟಕರ ವೇಳೆಯಲ್ಲಿ‌ ದೇಶ ವಾಸಿಗಳೂ ಕೂಡ ಪರಿಸ್ಥಿತಿಗೆ ಒಗ್ಗುತ್ತಿದ್ದಾರೆ ತಮ್ಮ ಬಹುಕಾಲದ ಹವ್ಯಾಸಗಳನ್ನು ಬದಲಾಯಿಸಿಕೊಳ್ಳುತಿದ್ದಾರೆ.
ಇದೇ ವೇಳೆಯಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಜಾರಿಗೊಳಿಸುವಲ್ಲಿ ಬಹುದೊಡ್ಡ ಸವಾಲಾದ ಮದ್ಯಪಾನ ನಿಷೇಧವನ್ನು ಭಾರತದಲ್ಲಿ ಜಾರಿಗೊಳಿಸಿ ಎಂಬ ಮನವಿಯನ್ನು ಈ ಪತ್ರದಮೂಲಕ ತಮ್ಮಲ್ಲಿ ನಿವೇದಿಸಿ ಕೊಳ್ಳುತಿದ್ದೇನೆ.ಇದರಿಂದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಎದುರಾಗುವುದು ನಿಜವಾದರೂ ಸಾಮಾಜಿಕ ಸ್ವಾಸ್ಥ್ಯದ ವಿಷಯದಲ್ಲಿ ಇದೊಂದು ದೂರಗಾಮಿ ಸತ್ಪರಿಣಾಮ ಉಂಟುಮಾಡಲಿದೆ.
ಈ ನಿಲುವು ಅನೇಕ ಮನೆಯನ್ನೂ ಅನೇಕ ಮಾತೆಯರ ಮಾಂಗಲ್ಯವನ್ನೂ ಉಳಿಸಲಿದೆ. ಕೊಲೆ ಸುಲಿಗೆ ಅತ್ಯಾಚಾರ ಗಳಂತಹ ಅಪರಾಧಗಳಲ್ಲಿ ಮದ್ಯಪಾನ ಪ್ರಮುಖ ಪಾತ್ರ ವಹಿಸುತ್ತಿದೆ ಅನೇಕ ಭೀಕರ ಅಪಘಾತಕ್ಕೂ ಮದ್ಯಪಾನ ವೇ ಕಾರಣ ವಾಗಿದೆಎಂಬ ಕಟುಸತ್ಯವನ್ನು ತಾವು ಬಲ್ಲಿರಿ.
ರಾಷ್ಟ್ರದ ಬಹುತೇಕ ಸಾತ್ವಿಕವರ್ಗ ಹಾಗೂ ಮಾತಾ ಭಗಿನಿಯರು ಈ ವಿಷಯದಲ್ಲಿ ತಮ್ಮ ಸರಕಾದ ಪರ ನಿಲ್ಲುವುದು ಶತಸಿದ್ಧವಾದುದರಿಂದ ಪ್ರತಿರೋಧವನ್ನು ಸುಲಭವಾಗಿ ಸಮಾಧಾನ ಮಾಡಬಹುದಾಗಿದೆ ಮೋದಿಜಿ.
ಹಿಂದೆ ದೇಶಕ್ಕೆ ಆರ್ಥಿಕ ಸಂಕಟ ಬಂದಾಗ ದೇಶದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಯವರು ಒಪ್ಪೊತ್ತು ಉಪವಾಸಕ್ಕೆ ಕೊಟ್ಟ ಕರೆಯನ್ನು ವೃತವಾಗಿ ಆಚರಿಸಿ ಬೆಂಬಲಿಸಿದ ದೇಶ ನಮ್ಮದು.ಇಂದೂ ಕೂಡ ಕೊರಾನ ಪಿಡುಗಿನ ವಿಷಯದಲ್ಲಿ ತಮ್ಮ ಮಾತುಗಳನ್ನು ಅಪ್ಪಣೆ ಎಂದೇ ಶಿರಸಾವಹಿಸಿ ಪಾಲಿಸುವವರು ದೇಶವಾಸಿಗಳಾಗಿದ್ದಾರೆ.ಭಾರತದಲ್ಲಿ
ಸಂಪೂರ್ಣ ಮದ್ಯಪಾನ ನಿಷೇಧದ ತೀರ್ಮಾನವಾದರೆ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಕೆಲವರು ವಾದಿಸುತ್ತಾರೆ.ಕಾಶ್ಮೀರದಂತಹ ಕ್ಲಿಷ್ಟ ವಿಷಯವನ್ನೇ ಸಂಭಾಳಿಸಿದ ತಮ್ಮ ಸಮರ್ಥ ಸರಕಾರಕ್ಕೆ ಇದನ್ನು ಹತ್ತಿಕ್ಕುವುದು ಕಷ್ಟ ಆಗಲಾರದು.
ಆರ್ಥಿಕ ನಷ್ಟ ಖಂಡಿತ ಆಗಲಿದೆ ಆದರೆ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಂಬಳ ಪಡೆದು ಖರ್ಚುಮಾಡಲು ದಾರಿ ಇಲ್ಲದೇ ದುಂದು ವೆಚ್ಚಮಾಡುವ ಒಂದು ವರ್ಗವೇ ಸೃಷ್ಟಿ ಆಗುತ್ತಿದೆ.ಇಪ್ಪತ್ತು ಇಪ್ಪೈದು ಸಾವಿರ ಮಾಸಿಕ ಆದಾಯದಲ್ಲಿ ಸಂತೃಪ್ತ ಬದುಕು ಸಾಗಿಸಲು ಸಾಧ್ಯವಿರುವಾಗ ಇದರ ನಾಲ್ಕು ಐದು ಪಟ್ಟು ಸಂಬಳ ಪಡೆದು ಮಾಡುವ ಉದ್ಯೋಗಕ್ಕೂ
ನ್ಯಾಯ ನೀಡದವರೂ ಇದ್ದಾರೆ.ಇಂಥ ಕೆಲವು ಸರಕಾರಿ ಹುದ್ದೆಗಳ ವೇತನವನ್ನುಕಡಿತಗೊಳಿಸಬಹುದಾಗಿದೆ. ದೇಶದ ಸಂಸದರ, ಶಾಸಕರ ಮಾಸಿಕ ವೇತನಗಳು, ನಿವೃತ್ತಿ ವೇತನಗಳು ಸಾಧ್ಯವಾದರೆ ಪುನರ್ ಪರಿಶೀಲನೆ ಮಾಡಿ ಕಡಿಮೆಗೊಳಿಸ ಬಹುದಾಗಿದೆ.ಈ ಮೂಲಕ ನಷ್ಟವನ್ನು ಸರಿದೂಗಿಸುವ ಪ್ರಯತ್ನ ಮಾಡಬಹುದಾಗಿದೆ.ಇಂದು ಕೂಲಿನಾಲಿ ಮಾಡಿ ಬದುಕು ಸಾಗಿಸುವ ಮನೆಯನ್ನು ಶ್ರೀಮಂತರ ಮನೆಯನ್ನೂ ಸಮಾನವಾಗಿ ಕೊಲ್ಲುವ ಈ ನಿಧಾನ ವಿಷದ ವಿರುದ್ಧ ನಿರ್ಣಾಯಕ ಸಮರವನ್ನು ಸಾರಬೇಕಿದೆ.ಆದುದರಿಂದ ಕರೋನಾ ಜೊತೆಗೆ ಸಾರಾಯಿ ಯನ್ನೂ ಭಾರತದಿಂದ ಮುಕ್ತಗೊಳಿಸಬೇಕೆಂದು
ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.ತನ್ಮೂಲಕ ರಾಷ್ಟ್ರ ಪಿತ ಮಹಾತ್ಮಾಗಾಂಧಿಜೀಯವರ ಕನಸು ನನಸು ಗೊಳ್ಳಲಿ ಎಂದು ಆಶಿಸುತ್ತೇನೆ.
ಭಗವಂತ ತಮಗೆ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಿ ಇನ್ನೂ ಹಲವಾರು ವರುಷಗಳ ಪರ್ಯಂತ ಭಾರತಮಾತೆಯ ಚರಣಸೇವೆಗೆ ಅವಕಾಶವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುವೆ.

ಧನ್ಯವಾದಗಳೊಂದಿಗೆ
ತಮ್ಮ ವಿಶ್ವಾಸಿ ಹಾಗೂ ಅಭಿಮಾನಿ

ಚಿದಾನಂದ ಹರಿ ಭಂಡಾರಿ. ಕಾಗಾಲ.

RELATED ARTICLES  ನಿಮ್ಮ ಇಂದಿನ ‌ದಿನ‌ ಹೇಗಿರಲಿದೆ? ದ್ವಾದಶ ರಾಶಿಗಳ ದಿನದ ಭವಿಷ್ಯ (03/01/2019)ಇಲ್ಲಿದೆ.