ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಮತಿ ಲಕ್ಷ್ಮಿ ಮೋಟ ಗೌಡ
ನಮ್ಮನೆಯ ಲಕ್ಷ್ಮಿ ಇವಳು. ಅಪರೂಪದ ಹಾಲಕ್ಕಿ ಒಕ್ಕಲಿಗ ಸಮಾಜದ ಅನೇಕರು ನಮ್ಮವರೇ ಆಗಿ ನಮ್ಮ ಜೊತೆ ಬಾಳ್ವೆ ಮಾಡುತ್ತಾರೆ. ಪ್ರಾಮಾಣಿಕತೆ, ನಿಷ್ಠೆ, ಕಷ್ಟ ಸಹಿಷ್ಣತೆ, ಜಾನಪದ, ಇವೆಲ್ಲವುಗಳ ಸಮುಚ್ಚಯ ಆ ಸಮುದಾಯ. ಲಕ್ಷ್ಮಿ ನಮ್ಮ ಮನೆಯದೇ ಒಂದು ಸದಸ್ಯೆ. ನಿನ್ನ ಬಗೆಗೊಂದು ಲೇಖನ ಬರೆಯಬೇಕೆಂದರೆ ಏನಂತಲೇ ತಿಳಿಯಲಿಲ್ಲ ಅವಳಿಗೆ. ಮುಗ್ಧತೆಗೆ ಮತ್ತೊಂದು ಹೆಸರು ಅವಳು.
ಲಕ್ಷ್ಮಿ ಮತ್ತು ಮೋಟ ಇಬ್ಬರೂ ನಮ್ಮ ಮನೆಯ ಕೃಷಿ, ಹೈನುಗಾರಿಕೆ ಇದರ ಮೇಲುಸ್ತುವಾರಿ ನೋಡಿಕೊಳ್ಳುವವರು. ನಾವಿಬ್ಬರೂ ಶಿಕ್ಷಕರಾಗಿ ನಮ್ಮ ನಮ್ಮ ಕೆಲಸಗಳಿಗೆ ತೆರಳಿದರೆ ಮನೆಯ ಅನೇಕ ಕೆಲಸಗಳನ್ನು ನಮ್ಮ ತಂದೆ ತಾಯಿಯವರ ಜೊತೆಯಲ್ಲಿ ತಮ್ಮದೇ ಮನೆಯ ಕೆಲಸವೆಂಬಂತೆ ಮೋಟ ಮತ್ತು ಲಕ್ಷ್ಮಿ ಮಾಡುತ್ತಾರೆ. ಎಷ್ಟೇ ಹೊತ್ತಿಗೆ ಹೇಳಿ ಕಳುಹಿಸಲಿ ಅವರು ಕೆಲಸಕ್ಕೆ ಹಾಜರ್. ಸಂಬಳಕ್ಕಾಗಷ್ಟೇ ದುಡಿಯುವ ಮಂದಿಯಲ್ಲ ಅವರು. ಸಂಬಳಕ್ಕಷ್ಟೇ ದುಡಿಸಿಕೊಳ್ಳುವವರೂ ನಾವಲ್ಲ. ಹೀಗಾಗಿ ನಮ್ಮ ಅವರ ನಡುವೆ ಕುಟುಂಬದ ಬಾಂಧವ್ಯ.
ನಮ್ಮ ಲಕ್ಷ್ಮಿಯನ್ನು ಕಂಡರೆ ನನಗೆ ತುಂಬಾ ಪ್ರೀತಿ. ಅವಳ ಹಾಲಕ್ಕಿ ಭಾಷೆ, ಸುದ್ದಿ, ಬಹಳ ಮಜಾ ಕೊಡುತ್ತದೆ. ಅವಳು ಬಂದ ಕಾಲಕ್ಕೆ ನಾನು ಅವಳು ಬೈ ಟು ಚಹ ಮಾಡಿ ಕುಡಿಯುತ್ತೇವೆ. ನಾನು ಚಹಾ ಕುಡಿಯುವುದಾದರೆ ಲಕ್ಷ್ಮಿ ಕಣ್ಣಿಗೆ ಕಂಡರೆ ಅವಳನ್ನು ಕೇಳದೇ ಕುಡಿದ ದಾಖಲೆಯೇ ಇಲ್ಲ. ಮಮತೆಯ ಮೂರ್ತಿ ಅವಳು. ಅವಳ ಜೊತೆ ಹಂಚಿ ತಿಂದರೆ ತಿಂದಿದ್ದೂ ರುಚಿಯೆನಿಸುತ್ತದೆ ನನಗೆ.
ಲಕ್ಷ್ಮಿ ಊರಿನ ಹಲವರ ಮನೆಗೆ ಕೆಲಸಕ್ಕೆ ಹೋಗುತ್ತಾಳೆ. ಗೊಬ್ಬರಕ್ಕಾಗಿ ಸೊಪ್ಪು ತರುವುದು. ತರಗಲೆಗಳನ್ನು ತರುವುದು, ಪಾತ್ರೆ ತೊಳೆಯುವುದು, ಮದುವೆ, ಉಪನಯನ ಸಮಾರಂಭಗಳು ಆದಾಗ ಅಲ್ಲಿಯ ಕೆಲಸ, ಅಕ್ಕಿ ಬೇಳೆ ಇತ್ಯಾದಿಗಳನ್ನು ಸ್ವಚ್ಛಗೊಳಿಸುವುದು, ನೆಲ ಒರೆಸುವುದು, ಕಟ್ಟಡದ ಕೆಲಸ, ಹೀಗೆ ಅವಳು ಬೆವರು ಸುರಿಸಿ ನೂರೆಂಟು ಕೆಲಸ ಮಾಡುತ್ತಾಳೆ. ಅವಳ ಶ್ರಮ ಅದು ಅಕ್ಷರಗಳೇ ನೊಂದು ಕೊಳ್ಳುವಂತಹುದು. ಹಾಗಂತ ಅವಳಿಗೆ ಒಂದು ಸ್ವಲ್ಪವೂ ಬೇಸರವಿಲ್ಲ. ಸಂತೋಷದಿಂದ ದಿನವಿಡೀ ಮಳೆ, ಚಳಿ, ಬಿಸಿಲೆನ್ನದೇ ದುಡಿಯುತ್ತಾಳವಳು.
ನಮ್ಮ ಲಕ್ಷ್ಮಿ ಒಂದು ಲೆಕ್ಕಕ್ಕೆ ಇಡೀ ಊರಿಗೇ ದನದ ಡಾಕ್ಟರ್. ಆಕಳಿಗೇನಾದರೂ ಆದರೆ ಪ್ರಥಮ ಚಿಕಿತ್ಸೆ ಕೊಡಿಸುವುದಕ್ಕೆ ಅವಳು ನಂ 1. ಗೋವಿನ ಸೇವೆಯನ್ನು ಅತ್ಯಂತ ಶೃದ್ಧೆಯಿಂದ ಮಾಡುವ ಲಕ್ಷ್ಮಿ ಅದಕ್ಕೆ ಮಾತ್ರ ಬಿಡಿಗಾಸನ್ನೂ ಬೇರೆಯವರಿಂದ ಬಯಸುವವಳಲ್ಲ.
ಲಕ್ಷಿಯದ್ದು ದೊಡ್ಡ ಧ್ವನಿ. ಸಂತೆಯೇ ಇರಲಿ, ಪೇಟೆಯೇ ಇರಲಿ, ಸುತ್ತಮುತ್ತ ಯಾರೇ ಇರಲಿ ನಾನು ಕಂಡರೆ ಅವಳು ಕರೆಯದೇ ಹೋಗುವಳೇ ಅಲ್ಲ. ನಾನಾದರೂ ಅಷ್ಟೇ…..ಅವಳು ಎಲ್ಲೇ ಸಿಗಲಿ ಹೋಯ್…..ಎಂದು ಕೂಗಿಯೇ ಮುಂದಕ್ಕೆ ಹೋಗುವುದು. ಎಲ್ಲಿಯ ಸಂಬಂಧವೋ ನಮ್ಮದು. ನನ್ನಿಂದ ಆದ ಉಪಕಾರವನ್ನು ಮಾಡುವುದಕ್ಕೆ ನಾನೆಂದೂ ಹಿಂದೆ ಸರಿಯುವವನಲ್ಲ. ಯಾಕೆಂದರೆ ಅವಳು ನಮ್ಮ ಮನೆಗೇ ಲಕ್ಷ್ಮಿ. ನಿನ್ನಿಂದ ಇಂಥದ್ದೊಂದು ಆಗಬೇಕೆಂದು ಹೇಳಿದರೆ ಅದನ್ನು ಅಷ್ಟು ಶಿಸ್ತಾಗಿ ಮಾಡಿ ಮುಗಿಸಿ ಕೊಡುತ್ತಾಳೆ ಅವಳು. ಎಷ್ಟು ಹಣ ಕೊಡಲೆ? ಎಂದು ಕೇಳಿದರೆ ಎಷ್ಟಾದರೂ ಕೊಡಿ ಹೇಳುವಳೇ ವಿನಹ ಇಂದಿನವರೆಗೂ ಇಂತಿಷ್ಟೇ ಕೊಡಿ ಎಂದ ಉದಾಹರಣೆಯೇ ಇಲ್ಲ. ನಾನು ಕೊಟ್ಟು ಮತ್ತೆ ಬೇಕಾ ಎಂದು ಕೇಳಿದರೆ ಇದೇ ಹೆಚ್ಚು ಎನ್ನುವಳೇ ವಿನಹ ಮತ್ತೆ ಬೇಸರ ಗೊಂಡ ಲಕ್ಷ್ಮಿಯಲ್ಲ ಅವಳು. ನಮ್ಮ ಲಕ್ಷ್ಮಿಯಂತಹ ವ್ಯಕ್ತಿ ಯಾವ ಶ್ರೀಮಂತನಿಗೆ ಕಡಿಮೆ ಹೇಳಿ?! ನಮ್ಮ ಲಕ್ಷ್ಮಿ, ಲಕ್ಷ್ಮಿಯ ಕೆಲಸ ಭಗವಂತನಿಗೂ ಮೆಚ್ಚುಗೆ ಎಂಬುದರಲ್ಲಿ ಎರಡು ಮಾತಿಲ್ಲ.
ಜೋಪಡಿಯ ಮನೆ, ಬೇರೆಯವರ ಮನೆಗೆಲಸವೇ ಜೀವನವಾಗಿ ಹೋದ ಲಕ್ಷ್ಮಿಯಂತಹ ಲಕ್ಷಾಂತರ ಜನರಿಗಾಗಿ ನಮ್ಮ ಮನಸ್ಸು ಮಿಡಿಯಬೇಕು. ನಮ್ಮ ಮನೆಯ ಹಬ್ಬವೇ ಲಕ್ಷ್ಮಿಗೆ ಹಬ್ಬ. ಗಂಡ ಮೋಟ, ಮಗ, ಮಗಳು, ಇವರ ಜೊತೆಗೆ ನಗು ನಗುತ್ತಾ ಸಂಸಾರದ ನೌಕೆ ಸಾಗಿಸುವ ಅವಳ ಬದುಕು ಯಾವತ್ತೂ ಖುಷಿಯಿಂದ ಇರಬೇಕೆಂಬುದೇ ನನ್ನ ನಿತ್ಯ ಪ್ರಾರ್ಥನೆ.
ತಾನು ತರಕಾರಿ ಬೆಳೆದರೂ ನಮಗಾಗಿ ಹೊತ್ತು ತರುವ ಉದಾರತೆ ಲಕ್ಷ್ಮಿಯದು. ನಮ್ಮ ಸುತ್ತಲಿನ ಜನಕ್ಕೆ ನಾವು ಸದಾ ಸಂತೋಷ ನೀಡಬೇಕು. ಲಕ್ಷ್ಮಿಗೆ ನಾನು ಹೀಗೆ ಬರೆಯುತ್ತೇನೆಂಬುದು ಗೊತ್ತಿದ್ದರೆ ನನ್ನ ಫೊಟೋಕ್ಕೂ ಅವಳು ಹೀಗೆ ಕುಳಿತು ಕೊಳ್ಳುತ್ತಿರಲಿಲ್ಲ. ತಮಾಷೆ ಮಾಡುತ್ತಾ ಕೆಲಸದ ಮಧ್ಯೆಯೇ ಅವಳ ಸುಂದರ ಫೋಟೋ ಕ್ಲಿಕ್ಕಿಸಿ ಅವಳಿಗಾಗಿ ಈ ಲೇಖನ ಬರೆದೆ. ಬಡವರ ಕಷ್ಟಗಳನ್ನು ವೈಭವೀಕರಿಸಿ ಅದರಿಂದ ಲಾಭ ಹೊಂದುವ ಉದ್ದೇಶ ಖಂಡಿತ ನನ್ನದಲ್ಲ. ನಮ್ಮ ಲಕ್ಷ್ಮಿಯ ವಿದ್ಯಾವಂತ ಮಕ್ಕಳಿಗಾದರೂ ಇದು ಮನಸ್ಸಿಗೆ ತೃಪ್ತಿ ತರಬಹುದೆನ್ನುವ ಆಶಾವಾದ.
ಲೆಕ್ಕಾಚಾರವೇ ಜೀವನವಲ್ಲ. ಹಾಗೆ ನೋಡಿದರೆ ಜೀವನ ಯಾವ ಲೆಕ್ಕಾಚಾರಕ್ಕೂ ಸಿಗುವುದಲ್ಲ. ಉದ್ಯೋಗ, ಸಂಬಳ, ಕೆಲಸ, ರೋಗ, ಅಪಘಾತ, ಆಸ್ತಿ, ಅದೃಷ್ಟ, ಇವು ಯಾವುದೂ ನಾವು ಅಪೇಕ್ಷೆ ಪಟ್ಟಂತೆ ಇರುವುದಿಲ್ಲ. ನಮ್ಮ ಪರಿಧಿಯಲ್ಲಿರುವ ಜನರಿಗೆ ಸ್ಪಂದಿಸುವ ಗುಣ ಮಾತ್ರ ನಾವು ಅಪೇಕ್ಷಿಸಿದಂತೆ ಇರಬಹುದು. ಅಕಸ್ಮಾತ್ ನಾವು ರಸ್ತೆಯಲ್ಲೆಲ್ಲೋ ಧಡಕ್ಕನೇ ಬಿದ್ದೇವೆಂದು ಇಟ್ಟುಕ್ಕೊಳ್ಳೋಣ. ನಮ್ಮನ್ನು ಇಸ್ತ್ರಿ ಹೊಡೆದ white collar ಮಂದಿ ಹಿಡಿದು ಎತ್ತುತ್ತಾರೆಂದು ಹೇಳಲಿಕ್ಕಾಗುವುದಿಲ್ಲ. ಆದರೆ ಅಲ್ಲಿಯೇ ಹೋಗುತ್ತಿರುವ ಹರಿದ ಅಂಗಿಯ ಹಮಾಲಿ ಅಯ್ಯೋ ಎಂದು ನಮ್ಮನ್ನು ಬೇಗ ಬಂದು ಎಬ್ಬಿಸ ಬಹುದು. ಎಲ್ಲರೂ ಹಾಗಿರುತ್ತಾರೆಂದು ಅಲ್ಲ. ನಮ್ಮವರು ಎಂಬುದರ ಅರ್ಥ ಏನು? ಸುಖವಿದ್ದಾಗ ಬಂದು ಪಾಯಸ ಉಣ್ಣುವವರಷ್ಟೇ ಅಲ್ಲ. ಕಷ್ಟವೆಂದ ಕಾಲಕ್ಕೆ ಕಣ್ಣೀರು ಮಿಡಿಯುವವರು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಲಕ್ಷ್ಮಿ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಲಕ್ಷ್ಮಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ