ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನ ಹಾಗೂ ಶಿಕ್ಷಣ ಪ್ರಸಾರಕ ಸಮಿತಿ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ -2017 ಮತ್ತು ಸನ್ಮಾನ ಸಮಾರಂಭ ಪಟ್ಟಣದ ಶೃಂಗೇರಿ ಶ್ರೀಶಂಕರಮಠದ ಸಭಾಭವನದಲ್ಲಿ ಆ.29ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಚಿರಂತನದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ಸಮಿತಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖ್ಯಾತ ರಂಗಭೂಮಿ ಕಲಾವಿದ ಹಾಗೂ ರಾಜಕೀಯ ವಿಶ್ಲೇಷಕ ಮಾಸ್ಟರ್ ಹಿರಣ್ಣಯ್ಯ, ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ, ಬೆಂಗಳೂರು ವಿವಿಯ ವಾಸ್ತುಶಾಸ್ತ್ರ ವಿಭಾಗದ ನಿರ್ದೇಶಕ ಪ್ರೊ.ಕೆ.ವಿ.ಗುರುಪ್ರಸಾದ ಪಾಲ್ಗೊಳ್ಳಲಿದ್ದಾರೆ. ಪ್ರಮೋದ ಹೆಗಡೆ ಯಲ್ಲಾಪುರ ಅಧ್ಯಕ್ಷತೆವಹಿಸುವರು.
ಅಲ್ಲದೆ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ರಾಮಕೃಷ್ಣ ಹೆಗಡೆ ಅವರ ಅನುಯಾಯಿಗಳಾದ ತಾಳಗುಪ್ಪಾದ ಚನ್ನವೀರ ಹುಚ್ಚಪ್ಪ, ಅಮ್ಮಚ್ಚಿಯ ಕೆ.ಆರ್.ಹೆಗಡೆ, ಗುಳ್ಳಾಪುರದ ಶ್ರೀಕಾಂತ ಶೆಟ್ಟಿ, ಮಂಚಿಕೇರಿಯ ಅಬ್ದುಲ್ ಶುಕೂರ್ ಅಬ್ಬಾಸ ಅಲಿ, ಹಸುವಂತೆಯ ರಾಮಾ ಮಾಸ್ತ್ಯಾ ನಾಯ್ಕ ಅವರನ್ನು ಸನ್ಮಾನಿಸಲಾಗುತ್ತದೆ.
2004ರಿಂದಲೇ ರಾಮಕೃಷ್ಣ ಹೆಗಡೆ ಚಿರಂತನ ಹೆಗಡೆಯವರ ಸಂಸ್ಮರಣಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ ಹೆಗಡೆ ಅವರ ಬಹುಮುಖ ವ್ಯಕ್ತಿತ್ವದ ಕುರಿತು ಹಾಗೂ ಹೊಸತಲೆಮಾರಿನ ರಾಜಕೀಯದವರು ಹೆಗಡೆ ಅವರ ಚಿಂತನೆಯನ್ನು ಅರಿತುಕೊಳ್ಳಲಿ ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.