ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಜಿ.ವಿ.ಹೆಗಡೆ ಗುಮ್ಮೇಕೇರಿ
ಮೂವತ್ತರ ಹರೆಯವದವನಿಗೊಬ್ಬ ಎಂಭತ್ತರ ಗೆಳೆಯ. ಬಿಳಿ ಅಂಗಿ, ಬಿಳಿ ಲುಂಗಿ ತೊಟ್ಟು ತನ್ನ ಜೀವಮಾನವಿಡೀ ಸ್ವಚ್ಛ ಬಿಳಿಯಾಗಿಯೇ ಇರುವ ನಿವೃತ್ತ ಪೋಸ್ಟ ಮಾಸ್ಟರ್ ಗ.ವೆಂ. ಗುಮ್ಮೇಕೇರಿಯವರು ನನ್ನ ಗುರು, ಸ್ನೇಹಿತ, ಆತ್ಮಬಂಧು.
ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಕೇಂದ್ರ ಮಟ್ಟದಲ್ಲೊಂದು ಭಾಷಣ ಸ್ಪರ್ಧೆ ನಡೆದಿತ್ತು. ಆ ಭಾಷಣ ಸ್ಪರ್ಧೆಯಲ್ಲಿ ನಾನು ಪ್ರಥಮ ಸ್ಥಾನ ಪಡೆದಿದ್ದೆ. ಆ ಬಹುಮಾನ ವಿತರಣೆಗೆ ಶ್ರೀಯುತ ಜಿ.ವಿ.ಹೆಗಡೆಯವರನ್ನು ಅಧ್ಯಕ್ಷರಾಗಿ ಅಲ್ಲಿ ಕರೆಸಲಾಗಿತ್ತು. ಅವರು ನನಗೆ ನೀಲಿ ಮತ್ತು ಕೆಂಪು ಎರಡೂ ಬಣ್ಣ ಒಂದರೊಳಗೇ ಇರುವ ಟಿಕ್ ಟಿಕ್ ಪೆನ್ನನ್ನು ಬಹುಮಾನವಾಗಿ ನೀಡಿದ್ದರು.??. ಅಲ್ಲಿಂದಲೇ ನನ್ನ ಟಿಕ್ ಟಿಕ್ ಸಮಯ ಬದಲಾದದ್ದು.
ನಾನು ಹೈಸ್ಕೂಲ್ ಹಂತ ಬಂದ ಕಾಲಕ್ಕೆ ನಮ್ಮ ತಂದೆಯವರು ಭಾಷಣ ಬರೆಸಿಕೊಂಡು ಬರುವುದಾದರೆ ಅವರಲ್ಲಿಗೆ ಹೋಗು…. ಬಹಳ ಚೆನ್ನಾಗಿ ಬರೆದು ಕೊಡುತ್ತಾರೆ… ಎಂದು ಸೂಚಿಸಿದರು. ನಾನು ನಮ್ಮ ಮನೆಯಿಂದ ಹತ್ತಿರವೇ ಇರುವ ಅವರ ಮನೆಗೆ ಭಾಷಣ ಬರೆದುಕೊಡಿ…. ಎಂದು ಹೋಗುತ್ತಿದ್ದೆ. ಅವರು ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆದರೂ ಅದಾಗಲೇ ‘ಆಚಾರ’, ‘ನಾಗರಿಕ’ ಮುಂತಾದ ಪತ್ರಿಕೆಗಳಿಕಗೆ ಆಗಾಗ ಚುಟುಕು, ಕವನ, ಲೇಖನಗಳನ್ನು ಕಳುಹಿಸುತ್ತಿದ್ದರು. ಸಾವಿರಕ್ಕೂ ಅಧಿಕ ಸನ್ಮಾನ ಪತ್ರಗಳನ್ನು ಅವರು ಬರೆದು ಕೊಟ್ಟಿರಬಹುದು. ಅವರು ನನಗೆ ನನ್ನ ಜೀವನದ ಗುರಿ ಎಂಬ ಭಾಷಣವನ್ನು ಮೊದಲ ಬಾರಿ ಬರೆದು ಕೊಟ್ಟರು. ‘ನಾನು ಜ್ಞಾನಿಯಾಗಬೇಕು’ ಎಂಬ ವಿಭಿನ್ನ ಚಿಂತನೆಯ ಜೀವನದ ಗುರಿ ಹಾಕಿಕೊಟ್ಟವರೇ ಅವರು.
ಇದ್ದುದನ್ನು ಇದ್ದ ಹಾಗೆ ಯಾರ ಮುಲಾಜಿಗೂ ಒಳಗಾಗದೇ ಧಡಕ್ಕನೇ ಹೇಳುವ ಸ್ವಭಾವ ಅವರದ್ದು. ಹಾಗೆ ಅವರು ಬರೆದು ಕೊಟ್ಟ ಭಾಷಣದ ಅಕ್ಷರಕ್ಷರಗಳನ್ನೂ ಉರು ಹೊಡೆದು ಬೊಲೋ ಭಾರತ ಮಾತಾ ಕೀ ಜೈ ಎಂದು ನಾನು ಅನೇಕ ಬಹುಮಾನಗಳನ್ನು ಪಡೆದೆ. ಸ್ವಲ್ಪ ಕಾಲ ಕಳೆದ ಮೇಲೆ ಅವರು ನನಗೆ ನಿನ್ನ ಭಾಷಣವನ್ನು ನೀನೇ ಬರೆಯಬೇಕೆಂದೂ ನಿನ್ನ ಭಾಷಣವನ್ನು ನಾನು ತಿದ್ದಿ ಮಾರ್ಗದರ್ಶನ ಮಾಡುವೆನೆಂದರು. ಆಗ ಶುರುವಾದದ್ದು ನನ್ನ ಬರವಣಿಗೆಯ ಗಾಥೆ. ನಾನು ಏನೇ ಬರೆಯಲಿ…ಹೇಗೇ ಬರೆಯಲಿ….”ಏ ಮಾರಾಯ ನೀ ನನಗಿಂತ ಚೊಲೋ ಬರೆತ್ಯಲೋ” ಅಂತ ಶಭಾಶ್ ಹೇಳುತ್ತಿದ್ದರು.
ನನ್ನ ಸಾಹಿತ್ಯದ ಸಾಧನೆಯಲ್ಲದ ಸಾಧನೆಯ ನಿಜವಾದ ಗುರು ಇವರು. ನನ್ನನ್ನು ಕರೆದುಕೊಂಡು ಸಾಹಿತ್ಯ ಸಮ್ಮೇಳನ ತಿರುಗಿಸುವುದು. ಎಲ್ಲಾದರೂ ಸಭೆ, ಸಮಾರಂಭಗಳಿಗೆ ನನ್ನನ್ನು ಕರೆದುಕೊಂಡು ಹೋಗುವುದು, ಹೀಗೆ ನನ್ನನ್ನು ಮನೆ ಮಗನಂತೆ ಕಂಡರು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅವರದೇ ಶೈಲಿ ನನ್ನೊಳಗೆ ಆವರಿಸಿ ಬಿಟ್ಟಿತು. ಪ್ರತಿದಿನ walking ಬರುತ್ತಿದ್ದ ಅವರು ನನ್ನನ್ನರಸಿಕೊಂಡು ಬಂದು ವಿಶೇಷ ಸುದ್ದಿಗಳನ್ನು ಹೇಳುತ್ತಿದ್ದರು. ಅವರದು ನನ್ನದು ಗುರು-ಶಿಷ್ಯ ಸಂಬಂಧಕ್ಕಿಂತ ಸ್ನೇಹವೇ ಆಗಿ ಪರಿವರ್ತಿತವಾಗಿ ಹೋಯ್ತು. ನನ್ನ ಪ್ರತಿಯೊಂದೂ ನೋವು ನಲಿವುಗಳನ್ನು ನಾನು ಅವರ ಹತ್ತಿರ ಹಂಚಿಕೊಳ್ಳುತ್ತಿದ್ದೆ. ಎಂತಹ ಗಂಭೀರವಾದ ಸಮಸ್ಯೆಗಳಿದ್ದರೂ ಅವರು ಅದಕ್ಕೆ ಸುಲಭವಾದ ಪರಿಹಾರೋಪಾಯ ಸೂಚಿಸುತ್ತಿದ್ದರು.
ಜಿ.ವಿ ಹೆಗಡೆಯವರು ಬರೆದ ಚುಟುಕುಗಳು, ಲೇಖನಗಳು ಅತ್ಯಂತ ಪ್ರಖರವಾಗಿ ಇರುತ್ತಿದ್ದವು. ನನಗೆ ಸಾಹಿತ್ಯದ ರುಚಿ ಹತ್ತಿಸಿದವರೇ ಅವರು. ಅನೇಕ ಪುಸ್ತಕಗಳನ್ನು ಓದಿದ್ದ ಅವರೇ ನನಗೊಂದು ಗ್ರಂಥಾಲಯವಾಗಿದ್ದರು. ನಾನು ನನ್ನ ಎಷ್ಟೋ ವಿಷಯಗಳನ್ನು ಮನೆಯಲ್ಲಿ ಹಂಚಿ ಕೊಳ್ಳುತ್ತಿರಲಿಲ್ಲ. ಮನೆಯವರಿಗೂ ತಿಳಿದಿಲ್ಲದ ನನ್ನ ವಿಷಯ ಅವರಿಗೆ ಗೊತ್ತಿರುತ್ತಿತ್ತು. ನನಗವರು ವೈಯಕ್ತಿಕ ಮಾರ್ಗದರ್ಶನ ಮಾಡುತ್ತಿದ್ದರು.
ಗ.ವೆಂ. ಎಂದೇ ಖ್ಯಾತರಾದ ಅವರು ಬಣ್ಣ ಬಣ್ಣದ ಅಂಗಿ ತೊಟ್ಟು ಓಡಾಡಿದವರಲ್ಲ. ಇಡೀ ಊರಿನಲ್ಲಿ ಅವರದೇ ಆದ ಯೂನಿಫಾರಂ ಅವರದ್ದು. ಎಂಭತ್ತರ ಈ ಹರೆಯದಲ್ಲೂ ಬತ್ತದುತ್ಸಾಹ ಅವರದ್ದು. ನರಗಳ ದೋಷದಿಂದ ಹೊರಗೆ ಓಡಾಡಲಾಗದಿದ್ದರೂ ಅವರು ಅವರ ಕೆಲಸ ಮಾಡಿಕೊಂಡು ಸ್ವಾಭಿಮಾನಿ ಆಗಿಯೇ ಬದುಕಬೇಕೆಂದು ಬಯಸುತ್ತಾರೆ. ಇಂಡಿಯನ್ ಪೋಸ್ಟ್ ಅಂದರೇ ಶಿಸ್ತು, ಪ್ರಾಮಾಣಿಕತೆ. ಅದನ್ನು ಅವರಲ್ಲಿಯೂ ನಾನು ಕಾಣುತ್ತೇನೆ.
ಜಿ.ವಿ.ಹೆಗಡೆಯವರಿಗೆ ವೆಂಕಟರಮಣ, ರಾಮ, ಲಕ್ಷ್ಮಣ, ಶಿವಾನಂದ, ಭಾರತಿ ಎನ್ನುವ ವಿದ್ಯಾವಂತ ಹಾಗೂ ಸಾಮಾಜಿಕ ಗೌರವ ಹೊಂದಿರುವ ಐವರು ಮಕ್ಕಳಿದ್ದಾರೆ. ತನ್ನ ಇಡೀ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂಥ ಬದುಕು ಸಾಗಿಸಿದ ಜಿ.ವಿ.ಹೆಗಡೆಯವರು ನನ್ನ ಪರಮಾಪ್ತರು.
ತಮಾಷೆ, ನಗು, ಗಂಭೀರ ಚಿಂತನೆ, ವಿಶ್ವಾಸ, ಇವೆಲ್ಲವುಗಳಿಂದ ನನ್ನೊಳಗಿನ ನಾನಾದ ಗ.ವೆಂ ಗುಮ್ಮೇಕೇರಿಯವರಿಗೆ ಅರ್ಹವಾಗಿಯೇ ಸಾರ್ವಜನಿಕ ಸನ್ಮಾನಗಳು ನೀಡಲ್ಪಟ್ಟಿವೆ. ಅವರೇ ನನ್ನ ಉಲ್ಲಾಸದ ಗುಳಿಗೆ. ಅವರೇ ನನ್ನ ವಸ್ತು- ವಿಷಯಗಳ ಮಳಿಗೆ, ಅವರೇ ನನ್ನ ಸಂಪೂರ್ಣ ಬದುಕಿನ ಏಳಿಗೆ, ಅವರ ಜೊತೆಗೆ ಜೊತೆಯಾಗೇ ಇರುತ್ತೇನೆ ಕೊನೆ ಗಳಿಗೆ.
ವೃದ್ಧಾಪ್ಯ ಎನ್ನುವುದು ಅನಿವಾರ್ಯ. ಒಬ್ಬ ವೃದ್ಧ ತನ್ನ ವೃದ್ಧಾಪ್ಯವನ್ನು ಹೇಗೆ ಕಳೆಯಬೇಕೆಂಬುದಕ್ಕೆ ಗ.ವೆಂ ನಿದರ್ಶನ. ವಟ ವಟ ಎನ್ನದ ಮಕ್ಕಳಿಗೆ ಇಲ್ಲ ಸಲ್ಲದ್ದನ್ನು ಭೋದಿಸದ, ನಾಳೆ ಏನಾಗುತ್ತದೋ ಎನ್ನುವ ಆತಂಕವಿಲ್ಲದ ಸರಳ ಜೀವಿ ನಮ್ಮ G.V. ಸದ್ಯ ಮನೆಯಲ್ಲಿ ಅನಾರೋಗ್ಯದ ನಡುವೆಯೂ ಆರೋಗ್ಯ ಕಾಪಾಡಿಕೊಂಡಿರುವ ಅವರನ್ನು ಕಣ್ಣೀರೇ ಸಾಕ್ಷಿಯಾಗಿ ನೆನಪಿಸಿಕೊಂಡು ನನ್ನೊಲವಿನ ಅಕ್ಷರಗಳ ಮಾಲೆಯನ್ನು ಅವರಿಗರ್ಪಿಸುತ್ತಿದ್ದೇನೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಜಿ.ವಿ.ಹೆಗಡೆಯವರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಜಿ.ವಿ.ಹೆಗಡೆಯವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ