ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅತ್ಯಗತ್ಯವಿರುವ ಹಿನ್ನೆಲೆಯಲ್ಲಿ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಮೂಲಕ ದಿನನಿತ್ಯದ ಅಗತ್ಯ ಜೀವನಾವಶ್ಯಕಗಳ ಪೂರೈಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದ್ದು, ಶಿರಸಿ ತಾಲೂಕಿನಾದ್ಯಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಅನುಮೋದಿತ ದಿನಸಿ ವರ್ತಕರ ಮೂಲಕ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಇದೂ ಅಲ್ಲದೇ ಶಿರಸಿ ನಗರ ವ್ಯಾಪ್ತಿಯಲ್ಲಿ ವಿನಾಯಕ ಕಾಲೋನಿ, ಲಯನ್ಸ್ ನಗರ, ಚಿಪಗಿ ಹಾಗೂ ಆದರ್ಶನಗರ ಪ್ರದೇಶಗಳ ಸಾರ್ವಜನಿಕರಿಗೆ ಸಹ ಸಂಘದ ಸಿಬ್ಬಂದಿಗಳ ಮೂಲಕ ಜೀವನಾವಶ್ಯಕ ವಸ್ತುಗಳನ್ನು ತಲುಪಿಸಲಾಗುತ್ತಿದೆ.
ಶಿರಸಿಯ ಮಾನ್ಯ ಸಹಾಯಕ ಆಯುಕ್ತರು ನಡೆಸಿದ ಸಭೆಯಲ್ಲಿ ಸೂಚಿಸಿದ ಪ್ರಕಾರ ಗ್ರಾಮೀಣ ಪ್ರದೇಶದ ಜನತೆಗೆ ಅಗತ್ಯ ಸಾಮಗ್ರಿಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಸಂಘದಲ್ಲಿ ಅಗತ್ಯ ಸಾಮಗ್ರಿಗಳು ಹಾಗೂ ಪಶು ಆಹಾರದ ಶಿಲ್ಕು ನಿರ್ವಹಣೆ ಹಾಗೂ ಅವುಗಳನ್ನು ಬೇರೆ ಬೇರೆ ಸ್ಥಳಗಳಿಂದ ತರಿಸಿಕೊಳ್ಳುವುದು, ಸಹಕಾರ ಸಂಘಗಳು ಹಾಗೂ ಅನುಮೋದಿತ ದಿನಸಿ ವರ್ತಕರಿಂದ ಆರ್ಡರ್ ಬುಕ್ಕಿಂಗ್ ಮಾಡಿಕೊಳ್ಳುವುದು, ಅದರ ಪ್ರಕಾರ ಅಗತ್ಯ ಸಾಮಗ್ರಿಗಳನ್ನು ಪ್ಯಾಕಿಂಗ್ ಮಾಡುವುದು, ಹಾಗೂ ಸಾಮಗ್ರಿಗಳ ಸರಬರಾಜು ಮಾಡುವ ಕಾರ್ಯವನ್ನು ವ್ಯವಸ್ಥಿತ ಹಾಗೂ ಶಿಸ್ತುಬದ್ಧವಾಗಿ ಸಿಬ್ಬಂದಿಗಳ ತಂಡದಿಂದ ನಿರ್ವಹಿಸಲಾಗುತ್ತಿದೆ. ಇದಲ್ಲದೇ ಔಷಧ ಸಾಮಗ್ರಿಗಳನ್ನು ಟಿ.ಎಸ್.ಎಸ್. ಔಷಧ ಅಂಗಡಿಗಳಲ್ಲಿ ಅಗತ್ಯವಿರುವ ಎಲ್ಲ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ಮಾರ್ಚ್ 30 ರಿಂದ ಏಪ್ರಿಲ್ 1ರವರೆಗೆ ಮೂರು ದಿನಗಳಲ್ಲಿ ಶಿರಸಿ ತಾಲೂಕಿನ ಸುಮಾರು ಶೇ.70ರಷ್ಟು ಗ್ರಾಮೀಣ ಪ್ರದೇಶದ ಜನತೆಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಭಾಗಕ್ಕೆ ಹಾಗೂ ಇತರೆ ಪ್ರದೇಶಗಳಿಗೆ ಅವರವರ ಬೇಡಿಕೆಗೆ ಅನುಸಾರವಾಗಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುವುದು.
ಕಳೆದ 3 ದಿನಗಳಲ್ಲಿ ಶಿರಸಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 23 ಸಹಕಾರಿ ಸಂಘಗಳು, 10 ಅನುಮೋದಿತ ದಿನಸಿ ವರ್ತಕರ ಮೂಲಕ ಹಾಗೂ ಶಿರಸಿ ನಗರ ಪ್ರದೇಶದಲ್ಲಿ 44 ಮನೆಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 65 ಮನೆಗಳಿಗೆ ನೇರವಾಗಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ಪೂರೈಸಲಾಗಿದೆ. ಇದಲ್ಲದೇ ಒಂದು ಊರು ಅಥವಾ ಗ್ರಾಮ ಮಟ್ಟದಲ್ಲಿ ಕನಿಷ್ಟ ಹತ್ತು ಸದಸ್ಯರಿಂದ ಹಣದ ಬೇಡಿಕೆ ಬಂದಲ್ಲಿ ಸಂಘದ ಸದಸ್ಯರಿಗೆ ಆಯಾ ಪ್ರದೇಶಗಳಿಗೆ ಹೋಗಿ ಹಣ ಬಟವಡೆ ಸಹ ಮಾಡಲಾಗುತ್ತಿದ್ದು ಈಗಾಗಲೇ ಸುಮಾರು 50 ಸದಸ್ಯರಿಗೆ ಈ ರೀತಿ ಹಣ ವಿತರಣೆ ಮಾಡಲಾಗಿದೆ. ಸಂಘವು ಕೇವಲ ವಾಣಿಜ್ಯಾತ್ಮಕ ದೃಷ್ಟಿ ಮಾತ್ರ ಹೊಂದಿಲ್ಲವಾಗಿದ್ದು, ಸಾಮಾಜಿಕ ಬದ್ಧತೆಯನ್ನೂ ನಿರ್ವಹಿಸುತ್ತಿದೆ ಎಂಬುದಕ್ಕೆ ಇದೇ ನಿದರ್ಶನವಾಗಿದೆ.