ಉತ್ತರ ಕನ್ನಡ ಜಿಲ್ಲೆಯ 8 ಕೊರೊನಾ ಸೋಂಕಿತರ ಪೈಕಿ ಇಬ್ಬರು ಈಗಾಗಲೇ ಗುಣಮುಖರಾಗಿದ್ದು ಅವರನ್ನ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡುವುದಾಗಿ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ಮಾಹಿತಿ ನೀಡಿದ್ದಾರೆ.
ಇಂದು ಕಾರವಾರದಲ್ಲಿ ಕನ್ನಡವಾಣಿ ಜೊತೆ ಮಾತನಾಡಿದ ಅವರು ಕಾರವಾರ ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ಈಗಾಗಲೇ ಇಬ್ಬರು ಪೂರ್ಣ ಗುಣಮುಖರಾಗಿದ್ದು ಅವರನ್ನ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ.
ಆದರೆ ಮುಂಜಾಗ್ರತೆಯ ಉದ್ದೇಶದಿಂದ ಮುಂದಿನ 14 ದಿನಗಳ ಕಾಲ ಜಿಲ್ಲಾಡಳಿತವೇ ಕ್ವಾರಂಟೈನ್ ಮಾಡಲಿದ್ದು ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗುವುದು.