ಕುಮಟಾ : ಇಂದು ಇಡೀ ಜಗತ್ತೇ ಸಂಕಷ್ಟದಲ್ಲಿದೆ.ಕೊರೋನಾ ವೈರಸ್ ನಿಂದ ವಿಶ್ವವೇ ತಲ್ಲಣಗೊಂಡಿದೆ. ಜನರೆಲ್ಲಾ ಅವರವರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಲಾಕ್ ಡೌನ್ ನ್ನು ಯಶಸ್ವಿಗೊಳಿಸಿ ಜನರ ಆರೋಗ್ಯ ಕಾಪಾಡಲು ಇತರ ತುರ್ತು ಇಲಾಖೆಗಳ ಜೊತೆಯಲ್ಲಿ ಆರಕ್ಷಕ ಇಲಾಖೆಯ ಸಿಬ್ಬಂದಿಗಳು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಜನರ ಆರೋಗ್ಯ ಸುರಕ್ಷತೆಗಾಗಿ ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕುಟುಂಬದವರೊಂದಿಗೂ ಒಡನಾಡಲು ಸುರಕ್ಷಿತ ಸಮಯವಿಲ್ಲದೇ ಅವರು ನಮಗಾಗಿ ನಮ್ಮ ಕುಟುಂಬದವರಿಗಾಗಿ ನೀಡುತ್ತಿರುವ ಸೇವೆ ಅಭಿನಂದನೀಯ.
ಸಮಯಕ್ಕೆ ಸರಿಯಾಗಿ ಊಟೋಪಚಾರದ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡ ಕುಮಟಾದ ಆರಕ್ಷಕ ಇಲಾಖೆಯ ಸಿಬ್ಬಂದಿಗಳಿಗೆ ತಾಯಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ , ಜೊತೆಗೆ ಜಗತ್ತಿಗೆ ಅಂಟಿದ ಮಹಾಮಾರಿ ಕೊರೋನಾ ಸೋಂಕು ಸಂಪೂರ್ಣ ನಾಶವಾಗಿ ಎಲ್ಲರೂ ನೆಮ್ಮದಿಯ ಜೀವನವನ್ನು ನಡೆಸುವಂತೆ ತಾಯಿ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ ತಾಯಿಯ ಆಣತಿಯಂತೆ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಬಾಬಾ ಪೈ ರವರ ಮಾರ್ಗದರ್ಶನದಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿಯ ಭಜಕರೆಲ್ಲಾ ಸೇರಿ ದೇವಿಯ ಪ್ರಸಾದ ರೂಪದಲ್ಲಿ ಅಕ್ಕಿಯನ್ನು ವಿತರಿಸುವ ಮೂಲಕ ಇಲಾಖೆಯ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.