ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಸದಾನಂದ ಯರಗಟ್ಟಿ ಕಂಕಣವಾಡಿ
ಸದಾಪಣ್ಣ….ನನ್ನ ಪ್ರೀತಿಯ ಸದಾಪಣ್ಣನನ್ನು ಹೊತ್ತು ನಿಮ್ಮ ಮುಂದೆ ನಾನಿಂದು ಬಂದಿದ್ದೇನೆ. ನಾನು ಪರಿಚಯಿಸುವ ವ್ಯಕ್ತಿಗಳು ಓದುಗರ ಜೀವನದಲ್ಲೂ ಅನೇಕರು ಬಂದಿರುತ್ತಾರೆ….ಮತ್ತು ಓದುವಾಗ ತಾನೂ ಅವರಿಗೊಂದು ಕೃತಜ್ಞತೆ ಹೇಳಬೇಕಿತ್ತು ಎನ್ನುವ ಭಾವ ಒಡಮೂಡಿದರೂ ನನ್ನ ಅಕ್ಷರಗಳಿಗೊಂದು ಧನ್ಯತೆ ಬರುತ್ತದೆ.
ನಮ್ಮಕ್ಕ 2002 ರಲ್ಲಿ ಶಿಕ್ಷಕಿಯಾಗಿ ದೂರದ ಚಿಕ್ಕೋಡಿ ಜಿಲ್ಲೆ ರಾಯಭಾಗ ತಾಲೂಕು ಕಂಕಣವಾಡಿಗೆ ಆಯ್ಕೆಯಾದಾಗ ನಮ್ಮಕ್ಕನಿಗೆ ಮೊದಲು ಸೂರು ಕೊಟ್ಟ owner ಇವರು. ಇವರ ಅಣ್ಣ ದಿ|| ಶ್ರೀ ಎಸ್ ಎಸ್ ಯರಗಟ್ಟಿ ಶಿಕ್ಷಕರಾಗಿದ್ದು ಎಮ್ಮೆ ಕಟ್ಟುವುದಕ್ಕೆಂದು ಒಂದು ಕಬ್ಬಿಣದ ತಗಡಿನ shed ನಿರ್ಮಿಸಿದ್ದರು. ಆದರೆ ಊರಿನಲ್ಲಿ ಎಲ್ಲೂ toilet ಇರುವ ಮನೆ ಇಲ್ಲದ ಕಾರಣ ನಮ್ಮ ತಂದೆಯವರು ಅವರನ್ನು ಪ್ರಾರ್ಥಿಸಿ ನಮ್ಮ ಮಗಳು ಈ shed ನಲ್ಲೇ ವಾಸ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ಅವರ ಒತ್ತಾಯಕ್ಕೆ ಮಣಿದು ನಮ್ಮಕ್ಕ ಆ ಮನೆ ಸೇರಿದಳು. ಅವಳು ಅಲ್ಲಿಗೆ ಹೋದ ಕೆಲವೇ ದಿನಕ್ಕೆ ನಾನು ವಿದ್ಯಾಭ್ಯಾಸ ಪೂರೈಸಿ ಅಲ್ಲಿಗೆ ಹೋದೆ.
ಯರಗಟ್ಟಿ ಸರ್ ಅವರ ತಮ್ಮನೇ ನಮ್ಮ ಇಂದಿನ ಅಕ್ಷರ ಅತಿಥಿ ಸದಾಪಣ್ಣ. ನಮ್ಮ ರೂಮಿನ ಒಂದು ಬಾಗಿಲು ತೆಗೆದರೆ ಸದಾಪಣ್ಣನ ಕಿರಾಣಿ ಅಂಗಡಿ. ಸದಾಪಣ್ಣನಿಗೂ ನನಗೂ ಬಲುವೇ ದೋಸ್ತಿ. ಸದಾಪಣ್ಣನಿಗೆ ಒಂದು ಕಾಲನ್ನು amputate ಮಾಡಿ elephant leg ಹಾಕಿದ್ದರು. ಆದರೂ ನಮ್ಮ ಸದಾಪಣ್ಣ ಬಲು active ಮನುಷ್ಯ. ಬಿಡುವಾದಾಗ ಹೊಲಿಗೆ ಮಾಡುವುದು. ಇಡೀ ದಿನ ಮನೆಯ ಕಿರಾಣಿ ಅಂಗಡಿ ನೋಡಿಕೊಳ್ಳುವುದು ಸದಾಪಣ್ಣನ ಜವಾಬ್ದಾರಿ. ಒಂದು ಕ್ಷಣ ಅಂಗಡಿಯಲ್ಲಿ ಗಿರಾಕಿ ಇಲ್ಲದಿದ್ದರೂ ಬಾಗಿಲು ಹಾಕಿಕೊಂಡೇ ನನ್ನ ಅವರ ಸಂಭಾಷಣೆ ನಡೆಯುತ್ತಿತ್ತು. ಅಕ್ಕ ಹಾಗೂ ನನ್ನನ್ನು ಬಲು ಜವಾಬ್ದಾರಿ ಹಾಗೂ ಕಾಳಜಿಯಿಂದ ನೋಡಿಕೊಂಡರವರು. ನಮ್ಮ ರೂಮಿನ ಬಾಗಿಲಿನಾಚೆಗೆ ಸದಾಪಣ್ಣ ಮತ್ತು ಆಂಟಿ ಮಲಗುತ್ತಿದ್ದರು. ಹೀಗಾಗಿ light off ಮಾಡಿದ ಮೇಲೂ ನಾವು ಅರ್ಧ ಗಂಟೆ ಸುದ್ದಿ ಹೇಳಿ ನಗು ತಮಾಷೆಗಳೊಂದಿಗೇ ಮಲಗುತ್ತಿದ್ದೆವು. ಅವರಿಗೆ ನಾನು ಪ್ರತಿದಿನ Good night…sweet dreams ಹೇಳುತ್ತಿದ್ದೆ. ಹಾಗಂದ ಮೇಲೆ ನನ್ನ ಕಣ್ಣಿಗೆ ನಿದ್ದೆ ಹತ್ತುವುದು. ನಾವು ಮಾಡುವ ಗರಿಗರಿ ದೋಸೆ ಸದಾಪಣ್ಣನಿಗೆ ಬಲುವೇ ಪ್ರೀತಿ. ಆಗೊಮ್ಮೆ ಈಗೊಮ್ಮೆ ಪ್ರೀತಿಯಿಂದ ಮಾಡಿಸಿಕೊಳ್ಳುತ್ತಿದ್ದರು. ದೀಪಾವಳಿ ಹಬ್ಬಕ್ಕೆ ನಾನು ಅವರ ಅಂಗಡಿಗೆ ಸಂಪೂರ್ಣ paint ಮಾಡಿ ಕೊಟ್ಟಿದ್ದೆ.
ಯರಗಟ್ಟಿ ಸರ್ ಬಹಳ strict ಮತ್ತು ಗಂಭೀರ. ತುಂಬಾ ಒಳ್ಳೆಯವರಾದರೂ ಅವರ ಹತ್ತಿರ ಮಾತನಾಡುವುದಕ್ಕೆ ನನಗೆ ತುಸು ಅಂಜಿಕೆ. ಯರಗಟ್ಟಿ ಟೀಚರ್ ಕೂಡಾ ತುಂಬಾ ಒಳ್ಳೆಯವರು. ಹೀಗಾಗಿ ಅವರ ಮನೆಯವರಿಗೆ ನಾವೂ ಅವರ ಮಕ್ಕಳಿದ್ದಂತೆ ಆಗಿದ್ದೆವು. 6×12 ಇರುವ ಒಂದೇ ಒಂದು ಕೋಣೆಯಲ್ಲಿ bathroom, kitchen, bedroom ಎಲ್ಲಾ…..ಹೀಗಿದ್ದೂ ನಮಗದು ಅವರ ಒಳ್ಳೆಯ ಮನಸ್ಸಿನ ಮುಂದೆ ಸಣ್ಣದೆನಿಸಲಿಲ್ಲ. ನಾನು ಅಕ್ಕ ಬಿಟ್ಟರೆ ಉಳಿದ ಮೂರನೆಯವರು ಬಂದರೆ ಒಬ್ಬರು ನಿಂತುಕೊಂಡೇ ಮಾತನಾಡಬೇಕಿತ್ತು.? ಆದರೂ ಜೀವನ ಹಾಗೋ ಹೀಗೋ ಕಳೆಯುತ್ತಿತ್ತು. ಸರಕಾರಿ ನೌಕರಿ ಆದುದರಿಂದ ಬಿಟ್ಟು ಬರುವುದಕ್ಕೂ ಮನಸ್ಸಾಗಲಿಲ್ಲ ಅಕ್ಕನಿಗೆ. ಅಂತೂ ಇಂತೂ ನನಗೂ ಮನೆಯ ಹತ್ತಿರವೇ ಸರಕಾರಿ ಉದ್ಯೋಗ ಸಿಕ್ಕಿತು. ಅಕ್ಕನಿಗೂ ಮತ್ತೆರಡು ವರ್ಷಕ್ಕೆ ಹೊನ್ನಾವರಕ್ಕೇ transfer ಆಯಿತು.
ಸಂಸಾರ ತಾಪತ್ರಯಗಳ ನಡುವೆ ಮನೆ ಬಿಟ್ಟು ನಮಗೆ ಮತ್ತೆ ಅಲ್ಲಿಗೆ ಹೋಗಲಿಕ್ಕೇ ಆಗಲಿಲ್ಲ. ಕಳೆದೆರಡು ವರ್ಷಗಳ ಹಿಂದೆ ಯರಗಟ್ಟಿ ಸರ್ ಗೆ accident ಆಗಿದೆ….. ಕೋಮಾಕ್ಕೆ ಹೋಗಿದ್ದಾರೆ…. ಎಂಬ ಸುದ್ದಿ ಸಿಕ್ಕಿದ್ದೆ….ನಾನು ಮತ್ತು ನಮ್ಮ ಅಕ್ಕ ಮಾತಾಡಿಕೊಂಡು ನಮ್ಮ ಮಕ್ಕಳು ಸಂಸಾರದ ಸಮೇತ 13 ವರ್ಷಗಳ ನಂತರ ಪುನಃ ಕಂಕಣವಾಡಿಗೆ ಭೇಟಿ ನೀಡಿದೆವು. ಚೈತನ್ಯಾಶ್ರಮದಲ್ಲಿ ಉಳಿದು ನಮ್ಮ ವಿದ್ಯಾರ್ಥಿ ರಾಘುವನ್ನು ಕರೆದುಕೊಂಡು ಯರಗಟ್ಟಿ ಸರ್ ಮನೆಗೆ ಹೋದರೆ……….
ಹೋದರೆ……ಅದು ಅಕ್ಷರಶಃ ಸ್ಮಶಾನ ಸದೃಶವಾಗಿತ್ತು. ನಮ್ಮ ಯರಗಟ್ಟಿ ಸರ್ ಕೋಮಾದಲ್ಲಿದ್ದುದರಿಂದ ಅವರನ್ನು ಒಂದು ಕೋಣೆಯಲ್ಲಿ ಇರಿಸಲಾಗಿತ್ತು. ಅವರನ್ನು ನೋಡಿಕೊಳ್ಳಲು ಒಬ್ಬರು ಆರೋಗ್ಯ ಸಹಾಯಕರನ್ನು ನೇಮಿಸಿ ಇಡಲಾಗಿತ್ತು. ಸದಾ……ದೂರವಾಣಿಯಲ್ಲೇ ನನ್ನ ಜೊತೆ ಮಾತನಾಡಿ ನನ್ನ ಪುಸ್ತಕಗಳನ್ನೆಲ್ಲಾ ತರಿಸಿಕೊಂಡಿದ್ದ ಯರಗಟ್ಟಿ ಸರ್ ಮುಖ…. ನಾನು ನೋಡಿದ ಯರಗಟ್ಟಿ ಸರ್ ಮುಖದ ತರಹ ಇರಲೇ ಇಲ್ಲ. ಒಂದು ಸಲ ದಿಗ್ಭ್ರಾಂತನಾಗಿ ಹೋದೆ ನಾನು. ಅವರು ಅವರ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆಂಬುದು ನನಗೆ ಪಕ್ಕಾ ಆಯಿತು. ಉಕ್ಕಿ ಬಂದ ಕಣ್ಣೀರನ್ನು ತಡೆದು ನಮ್ಮ ಸದಾಪಣ್ಣ ಎಲ್ಲಿ?! ಎಂದು ಕೇಳಿದೆ. ಸದಾಪಣ್ಣನಿಗೆ ಪಾರ್ಶ್ವವಾಯುವಾಗಿ ಅವನನ್ನು ಪಕ್ಕದ ಕೋಣೆಯಲ್ಲಿ ಮಲಗಿಸಲಾಗಿತ್ತು. ಯಾರ ಹತ್ತಿರವೂ ನಾನು ಬಂದಿದ್ದೇನೆಂಬ ವಿಷಯ ಹೇಳಬೇಡಿ…. ಎಂದು ನಾನೇ ನಿಧಾನ ಹೋಗಿ ಕತ್ತಲ ಕೋಣೆಯ ಬಾಗಿಲು ತೆರೆದೆ. ಎಲ್ಲರೂ ನನ್ನನ್ನು ಹಿಂಬಾಲಿಸಿದರು. ಸದಾಪಣ್ಣ ಯಾರೋ ಬಂದಾರೆಂದು ಹಾಸಿಗೆಯ ಮೇಲೆ ಏಳುವ ಪ್ರಯತ್ನ ಮಾಡಿದರು. ಆಂಟಿ ಅವರನ್ನು ನಾನ್ಯಾರೆಂದು ಪ್ರಶ್ನಿಸಿದರು. ಹದಿಮೂರು ವರ್ಷಗಳ ನಂತರವೂ ಒಂದೇ ಕ್ಷಣದೊಳಗೆ ನಮ್ಮ ಸದಾಪಣ್ಣ ಒಮ್ಮೆ ದೊಡ್ಡದಾಗಿ ಕಣ್ತೆರೆದು ಅವರು ನಮ್ಮ ಸಂದೀಪ ಸರ್………” ಎಂದು ಹೇಳಿ ಗಳಗಳನೆ ಅತ್ತುಬಿಟ್ಟರು. ಅಷ್ಟು ಹೇಳಿದ್ದರೆ ನಾನೂ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ. ಆದರೆ ನೀವು ಹೋದ ಮೇಲೆ ನನಗೆ Good night Sweet dreams ಹೇಳುವವರೇ ಇಲ್ಲ ಅಂದಾಗ ದುಃಖ ಒತ್ತರಿಸಿ ಬಂದು ಹೋಯ್ತು. ನಮ್ಮ ಸದಾಪಣ್ಣನ ಹಾಸಿಗೆಯ ಮೇಲೆ ಕುಳಿತು ಅವನ ಕೈಯನ್ನು ಹಿಡಿದು ಸಮಾಧಾನ ತಂದುಕೊಂಡೆ. ಸರಿ ಸುಮಾರು ಒಂದು ಗಂಟೆ ಅವರ ಮನೆಯಲ್ಲಿದ್ದು ನೋವಿನಲ್ಲೂ ಭಾಗಿಯಾಗಿ ಬಂದೆವು.
ಸದಾಪಣ್ಣ ತನಗೊಂದು ಕಾಲಿನ ಕೊರತೆ ಇದೆ….. ಎಂದು ಬದುಕಿದವನೇ ಅಲ್ಲ. ತನ್ನ ಶಕ್ತಿ ಮೀರಿ ದುಡಿಮೆ ಮಾಡುತ್ತಿದ್ದ. ಆದರೆ ಜೀವನದಲ್ಲಿ ನಾವಾಡಿದ ಇಷ್ಟು ಚಿಕ್ಕ ಮಾತು, ಶುಭಾಶಯಗಳು ನಾವಿಲ್ಲದಿರುವಾಗಲೂ ನೆನಪಿರುತ್ತವೆ ಎಂಬುದಕ್ಕೆ ನಮ್ಮ ಸದಾಪಣ್ಣ ಸಾಕ್ಷಿ. ನೀವು ಹೋದ ಮೇಲೆ ನಮ್ಮ ಮನೆಯ ಸಂತಸವೇ ಹೊರಟು ಹೋದಂತಾಯಿತೆನ್ನುವ ಸದಾಪಣ್ಣನ ಮಾತುಗಳು ಈ ಕ್ಷಣಕ್ಕೂ ಬೇಸರ ತರಿಸುತ್ತದೆ. ನೊಂದುಕೊಳ್ಳುವಂತಾಗುತ್ತದೆ. ಮಕ್ಕಳಾದ ವಿಶು, ಸಚಿನ್, ರುಕ್ಮವ್ವ ಈಗ ಬೆಳೆದು ದೊಡ್ಡವರಾಗಿದ್ದಾರೆ. ನಮ್ಮ ಯರಗಟ್ಟಿ ಸರ್ ತೀರಿಕೊಂಡರು. ಯರಗಟ್ಟಿ ಟೀಚರ್ ಮನೆಯನ್ನು ನಿಭಾಯಿಸಿಕೊಂಡು ಹೋಗುತ್ತಾರೆ.
ಕಷ್ಟ, ನೋವು, ರೋಗ, ಸಾವು ಹೇಳಿ.. ಕೇಳಿ..ಬರುವುದಲ್ಲ. ಅವು ಬಂದ ಕಾಲಕ್ಕೆ ಹತ್ತಿರದವರ ಸಾಂತ್ವನದ ಮಾತುಗಳು ಜೀವನೋತ್ಸಾಹ ತುಂಬುತ್ತವೆ. ಸದಾಪಣ್ಣನ ಆರೋಗ್ಯ ಸುಧಾರಿಸಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸದಾಪಣ್ಣ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಸದಾಪಣ್ಣನಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ