ನವದೆಹಲಿ: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೇ 3ರವರೆಗೂ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ದೇಶವನ್ನುದ್ದೇಶಿಸಿ ಇಂದು ಮಾತನಾಡಿದ ಅವರು, ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟ ಅದ್ಬುತವಾಗಿ ನಡೆಯುತ್ತಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಎಲ್ಲರ ತ್ಯಾಗದಿಂದ ಇಂದು ಭಾರತ ಸುರಕ್ಷಿತವಾಗಿದೆ ಎಂದರು.
ನಿಮ್ಮ ತ್ಯಾಗದಿಂದ ಹಾನಿ ಕಡಿಮೆಯಾಗಿದೆ. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸಿದ್ದೀರಿ. ನಿಮ್ಮ ಪರಿಶ್ರಮದಿಂದಲೇ ಪರಿಣಾಮ ಕಡಿಮೆಯಾಗಿದ್ದು, ಇದರಿಂದ ಪಾರಾಗಬಹುದು. ಪ್ರಮುಖವಾಗಿ ಯಾರಿಗೂ ಸಹ ಊಟದ ತೊಂದರೆಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎಂದರು.
ಅಸಮಾನತೆಯ ವಿರುದ್ಧ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಇಂದು ದೇಶವಾಸಿಗಳ ಪರವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ ಎಂದರು.
ಭಾರತದಲ್ಲಿ ಸದಾಕಾಲ ಉತ್ಸವಗಳು ನಡೆಯುತ್ತವೆ. ಅನೇಕ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬಗಳ ಕಾಲವಿದು. ಆಯಾ ರಾಜ್ಯದ ಜನರಿಗೆ ನಾನು ಶುಭಾಷಯ ಕೋರುತ್ತೇನೆ ಎಂದರು.
ಕೊರೋನಾ ಪೀಡಿತ ದೇಶಗಳಿಂದ ಆಗಮಿಸುವ ವ್ಯಕ್ತಿಗಳನ್ನು ಪರೀಕ್ಷಿಸಲಾಗುತ್ತಿತ್ತು. ವಿವಿಧ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಸುರಕ್ಷಿತವಾಗಿದ್ದೇವೆ. ಸೋಂಕಿತರ ಸಂಖ್ಯೆ 100 ಆಗಿದ್ದಾಗ 14 ದಿನ ಕ್ವಾರಂಟೈನ್ ಮಾಡಿದ್ದೇವೆ ಎಂದರು.
ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ, ದೇಶವಾಸಿಗಳ ಜೀವಕ್ಕಿಂತಲೂ ಆರ್ಥಿಕತೆ ದೊಡ್ಡದಲ್ಲ. ನಿಮ್ಮ ಹಾಗೂ ನಿಮ್ಮ ಪರಿವಾರದ ಆರೋಗ್ಯದ ಕುರಿತಾಗಿ ನಾನು ಪ್ರಾರ್ಥಿಸುತ್ತೇನೆ ಎಂದರು.
ಎಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣ ಅನುಷ್ಠಾನಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಆ ಬಳಿಕ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು. ಎಪ್ರಿಲ್ 20ರ ಬಳಿಕ ಲಾಕ್ ಡೌನ್ ಭಾಗಶಃ ತೆರವುಗೊಳಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗುವಂತಿಲ್ಲ. ಈ ಕುರಿತಾಗಿ ವಿಸ್ತೃತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ದೇಶದಲ್ಲಿ ಅವಶ್ಯಕ ಸಾಮಾಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ ಎಂದರು.
Source : news kalpa