ಕುಮಟಾ : ಎಲ್ಲೆಡೆ ಕರೋನಾ ಕರಿನೆರಳು ಚಾಚಿದ್ದರೆ ಕರೋನಾ ತಡೆಗಾಗಿ ಶೃಮಿಸುತ್ತಿರುವ ಅನೇಕ ವೈದ್ಯರು ಹಾಗೂ ನರ್ಸಗಳು ನಮ್ಮ ನಡುವಿದ್ದಾರೆ. ಅಂತವರಲ್ಲಿ ಒಬ್ಬರಾದ ಡಾ. ಸತೀಶ ಭಟ್ಟ ರವರು ಕರೋನಾ ನಿಯಂತ್ರಣಕ್ಕೆ ಜನತೆ ಸಹಕಾರ ನೀಡಬೇಕು ಎಂದಿದ್ದಾರೆ. ಹೋಂಮ್ ಕ್ವಾರೈಂಟೈನ್ ಇರುವವರ ಬಗ್ಗೆ ಕಾಳಜಿ ವಹಿಸಿರುವ ಅವರು ಜನತೆಗೆ ಅನೇಕ ಮನವಿ ಮಾಡಿದ್ದಾರೆ. ಅತಿ ದೊಡ್ಡ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಯಾಗಿರುವ ಅವರು ಜನತೆ ಕರೋನಾ ತಡೆ ಮುನ್ನೆಚ್ಚರಿಕೆ ಬಗ್ಗೆ ವಿವರಿಸಿದ್ದಾರೆ.
ಜಗತ್ತಿನ ಮೇಲೆ ಅನಿರೀಕ್ಷಿತ ಪ್ರಹಾರ ಈ ಕರೋನ ವೈರಸ್ ಸಮೂಹದ ಕೋವಿಡ್-19 . ಇದೊಂದು ಅತ್ಯಂತ ಕ್ಷಿಪ್ರವಾಗಿ ತೀವ್ರವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿ ವೈದ್ಯಸಮೂಹಕ್ಕೇ ಸವಾಲಾಗಿದ್ದು ಸದ್ಯಕ್ಕೆ ಸರಿಯಾದ ಚಿಕಿತ್ಸೆ ಸಂಶೋದಿಸುವ ಮೊದಲೇ ಹಲವರ ಮ್ರತ್ಯುವಿಗೆ ಕಾರಣವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಮನುಷ್ಯರನ್ನು ಹಿಂಡಿಹಿಪ್ಪೆ ಮಾಡಿದ ಕರೋನಾಕ್ಕೆ ಕರಾರುವಾಕ್ಕಾದ ಔಷಧ ಇಲ್ಲದಿದ್ದರೂ ವೈಯಕ್ತಿಕ ಸ್ವಚ್ಚತೆ ಹಾಗೂ ಸಾಮಾಜಿಕವಾಗಿ ಜನರ ನಡುವೆ ಅಂತರ ಕಾಯ್ದುಕೊಳ್ಳುವುದು ಎಕೈಕ ಉಪಾಯವಾಗಿದೆ.
ನಮ್ಮಕರ್ತವ್ಯ
ಪ್ರತಿಯೊಬ್ಬರೂ ಕೆಲವೊಂದು ಸಾಮಾನ್ಯ ಸೂತ್ರಗಳನ್ನು ಪಾಲಿಸಿದರೆ ಈ ರೋಗದಿಂದ ಬಳಲುವದರಿಂದ ತಪ್ಪಿಸಿಕೊಳ್ಳಲು ಸಾಧ್ಯ ಅಷ್ಟೇ ಅಲ್ಲದೇ ನಮ್ಮ ಕುಟುಂಬ ನಮ್ಮ ಗ್ರಾಮ ನಮ್ಮ ತಾಲುಕು ಜಿಲ್ಲೆಯನ್ನು ಕೊರೊನ ಪ್ರವಾಹದಿಂದ ರಕ್ಷಿಸಬಹುದು. ಮೊಟ್ಟ ಮೊದಲನೆಯದಾಗಿ ಈ ವೈರಸ್ ಬಗ್ಗೆ ಲಘುದೋರಣೆಯನ್ನು ಮನಸ್ಸಿನಿಂದ ತೆಗೆದುಹಾಕಿ, ವಿಶ್ವದಲ್ಲುಂಟಾದ ಅಲ್ಲೊಲಕಲ್ಲೋಲ ನಮ್ಮ ದೇಶದಲ್ಲಿ ಉಂಟಾಗದಂತೆ ತಡೆಯಲು ಪ್ರತಿ ನಾಗರಿಕ ಶ್ರಮಿಸಿದರೆ ಈ ಮೂಲಕ ದೇಶಸೇವೆ ಮಾಡಿದಂತೆ ಆಗುತ್ತದೆ. ನಮ್ಮ ಸ್ಥಳೀಯ ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ಈ ರೋಗ ಸಮದಾಯಿಕವಾಗಿ ಹರಡಂತೆ ತಡೆಗಟ್ಟಬಹುದು.
ಸಾಮಾಜಿಕ ಅಂತರ ಪಾಲನೆ
ಸರಕಾರೀ ಆದೇಶ, ತಜ್ಞರ ಸಲಹೆ, ಆರೋಗ್ಯಾಧಿಕಾರಿಗಳ ಸೂಚನೆ ಪಾಲಿಸುವುದು ಇಂತಹ ಕ್ಲಿಷ್ಟಕರ ಸಮಯದಲ್ಲಿ ನಮ್ಮೆಲ್ಲರ ಜವಾಬ್ದಾರಿ. ಒಬ್ಬರಿಂದ ಒಬ್ಬರಿಗೆ ಸೋಂಕಿತ ವ್ಯಕ್ತಿಯ ಮುಖದ ಸ್ರಾವ, ಕೆಮ್ಮಿದಾಗ, ಸೀನಿದಾಗ, ಮಾತನಾಡಿದಾಗ ಈ ವೈರಸ್ ಸಂಪರ್ಕ ಸಾಧಿಸಿ ರೋಗಕ್ಕೆ ಕಾರಣವಾಗುತ್ತದೆ. ಇದು ಸಾಧಾರಣವಾಗಿ ಗಾತ್ರದಲ್ಲಿ ದೊಡ್ಡದಾಗಿದ್ದು ತೀರಾ ಹತ್ತಿರ ಇರುವ ವ್ಯಕ್ತಿಗೆ ತಗಲುತ್ತದೆ ಹಾಗೂ ಸೋಂಕಿರುವ ವಸ್ತು ಆರೋಗ್ಯವಂತ ವ್ಯಕ್ತಿ ತನ್ನ ಕೈಯಿಂದ ಮುಟ್ಟಿ ತನ್ನ ಬಾಯಿ, ಕಣ್ಣು, ಮೂಗನ್ನು ಮುಟ್ಟಿಕೊಂಡರೂ ಈ ಭಯಾನಕ ರೋಗ ಹರಡುತ್ತದೆ. ಹಾಗಾಗಿಯೇ (Social Distance) ಸಾಮಾಜಿಕ ಅಂತರ ಅಂದರೆ ಮನೆಗಳಿಂದ ಹೊರಬಾರದೆ, ವ್ಯಕ್ತಿಗಳ ಜೊತೆ ಅತಿ ಹತ್ತಿರ ಸಂಪರ್ಕ ಮಾಡದೇ, ಕೈ ಕುಲಕದೇ, ಇನ್ನೊಬ್ಬರ ಮುಟ್ಟದೇ, ಟೇಬಲ್ ಕುರ್ಚಿ ಇನ್ನಿತರ ವಸ್ತುಗಳನ್ನು ಮುಟ್ಟಿಕೊಂಡು ಮುಖ ವರೆಸಿಕೊಳ್ಳುವುದು ಮಾಡದೇ ನಮ್ಮ್ಮನ್ನು ನಾವು ನಿಯಂತ್ರಿಸಿಕೊಂಡರೆ ಅರ್ಧ ಯುದ್ಧ ಗೆದ್ದಂತೆ.
ಮನೆಯಲ್ಲೇ ಮಾಡುವ ಸುಲಭ ವಿಧಾನ
ಅದಲ್ಲದೇ ಕೈಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ಒಂದೆರಡು ನಿಮಿಷಗಳ ಕಾಲ ತೊಳೆಯುವದು. ಉತ್ತಮ ಆಹಾರ ಪದ್ದತಿ, ಉತ್ತಮ ನಿದ್ದೆ, ಹಾಗೂ ಯೋಗ ಪ್ರಾಣಾಯಾಮ ಮಾಡುವುದು ರೋಗನಿರೋದಕ ಶಕ್ತಿ ವರ್ಧನೆ ಗೆ ಅನುಕೂಲ. (ಈ ವೈರಸ್ 80-85% ನಮ್ಮ ಇಮ್ಯುನ್ ಸಿಸ್ಟಮ್ ಅಂದ್ರೆ ರೋಗನಿರೋಧಕ ವ್ಯವಸ್ಥೆ ಯಿದಲೇ ತಡೆಗಟ್ಟಬಹುದು) ಅನಿವಾರ್ಯ ಸಂದರ್ಭಗಳಲ್ಲಿ, ಹಾಗೂ ಜನರ ಗುಂಪುಗಳಲ್ಲಿ ಓಡಾಡುವಾಗ (ಜನಜಂಗುಳಿ, ಗುಂಪುಗುಂಪಾಗಿ ಸೇರುವುದು ಮಹಾಪರಾಧ ಈ ಸಮಯದಲ್ಲಿ) ಮುಖಗವಸು, ಕೈಗವಸು ಸ್ವಲ್ಪಮಟ್ಟಿಗೆ ರಕ್ಷಣೆ ಆದೀತು. ಸೋಂಕು ಹರಡಿರುವ ಪ್ರದೇಶದಲ್ಲಿನ ಜನ ಅಲ್ಲೇ ಉಳಿದು ಹಳ್ಳಿಗಳಿಗೆ ಪ್ರವಾಸ ಮಾಡದೇ ಇದ್ದರೆ ತುಂಬಾ ಒಳಿತು. ಯಾವುದೇ ರೀತಿಯಲ್ಲಿ ಥಂಡಿ ಕೆಮ್ಮು ಜ್ವರ ಕಾಣಿಸಿಕೊಂಡರೆ ತಜ್ಞ ವೈದ್ಯರ ಸಹಾಯ ಪಡೆದುಕೊಳ್ಳುವುದು. ನಿಷ್ಕಾಳಜಿ ಮಾಡದೆ ಜಾಗರೂಕರಾಗಿದ್ದರೆ ಈ ವೈರಸ್ ಅಪಾಯದಿಂದ ಪಾರಾಗಬಹುದು ಎಂದು ಡಾ ಸತೀಶ್ ಭಟ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ ರವರು ತಿಳಿಸಿದ್ದಾರೆ.