ಕುಮಟಾ :ಸೇವೆ ಎನ್ನುವ ಪದಕ್ಕೆ ತಮ್ಮ ಕಾಯಕದ ಮೂಲಕ ಇಂದು ನಿಜವಾದ ಅರ್ಥ ಕೊಟ್ಟವರು ಮಹಿಳಾ ಮಣಿಗಳಾದ ಆಶಾ ಕಾರ್ಯಕರ್ತೆಯರು. ವಿಶ್ವದ ತುಂಬೆಲ್ಲಾ ಕೊರೋನಾ ವೈರಸ್ ಹರಡುತ್ತಿರುವ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ನೆನಪಾಗುತ್ತಿದ್ದಾರೆ ಆಶಾ ಕಾರ್ಯಕರ್ತೆಯರು. ಸರ್ಕಾರ ಕೊಡುತ್ತಿರುವ ಅಲ್ಪ ಸ್ವಲ್ಪ ಗೌರವ ಸಂಭಾವನೆ ಪಡೆದು ತಮ್ಮ ಜೀವನವನ್ನು ಸಾಗಿಸುತ್ತಿರುವ ಈ ಆಶಾ ಕಾರ್ಯಕರ್ತೆಯರು ಇಂದು ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಶೃದ್ಧೆಯಿಂದ ತೊಡಗಿಸಿಕೊಂಡು ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ.
ಪ್ರತಿ ನಿತ್ಯ ಸುಡುಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ತೆರಳಿ ಜನರ ಆರೋಗ್ಯದ ಕುರಿತು ವಿಚಾರಿಸಿ ಸುರಕ್ಷತಾ ಕ್ರಮದ ಕುರಿತು ಮಾಹಿತಿಯನ್ನು ನೀಡುತ್ತಾ ಸೋಂಕಿತರನ್ನು ಗುರುತಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ದಿನದ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಸಾಮಾಜಿಕವಾಗಿ ಹಿಂದುಳಿದ ವರ್ಗದ ,ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಆಯ್ದ ಕುಂಟುಂಬಗಳಿಗೆ ಆಸರೆಯಾಗಿ ತಾಯಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಬಾಬಾ ಪೈ ರವರ ಮಾರ್ಗದರ್ಶನದಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿಯ ಭಜಕರೆಲ್ಲಾ ಸೇರಿ ದೇವಿಯ ಪ್ರಸಾದ ರೂಪದಲ್ಲಿ ಧನಸಹಾಯವನ್ನು ಮಾಡುತ್ತಿರುವುದು ಅಭಿನಂದನಾರ್ಹವಾದುದು ಹಾಗೂ ಅನುಕರಣೀಯವಾದುದು. ಭವಿಷ್ಯದಲ್ಲಿ ತಮ್ಮ ಜೀವನಾಧಾರದ ಕುರಿತು ಕನಸನ್ನು ಹೊತ್ತಿ ಆಶಾಭಾವನೆಯೊಂದಿಗೆ ಸಹಕರಿಸುತ್ತಿರುವ ಆಶಾ ಕಾರ್ಯಕರ್ತೆಯರ ಬಾಳು ಉಜ್ವಲವಾಗಲೆಂಬ ಪ್ರಾರ್ಥನೆಯೊಂದಿಗೆ ಪ್ರೋತ್ಸಾಹದಾಯಕ ಕಾಣಿಕೆಯ ರೂಪದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.