ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆ ವಹಿವಾಟುಗಳು ಸ್ಥಗಿತಗೊಂಡಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನಾವಶ್ಯಕ ದಿನಸಿ ಹಾಗೂ ಔಷಧ ಸಾಮಗ್ರಿ ಪೂರೈಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಿಂದ ಈ ಸಂದರ್ಭದಲ್ಲಿ ಅಡಿಕೆ ಮಾರಾಟ ಮಾಡಲಾಗದೇ ತೊಂದರೆಗೀಡಾಗಿರುವ ಅಡಿಕೆ ಬೆಳೆಗಾರ ಸದಸ್ಯರ ಅನುಕೂಲಕ್ಕಾಗಿ ಅಡಿಕೆಯ ನೇರ ಖರೀದಿ ಆರಂಭಿಸಲಾಗಿದೆ.


ಸದ್ಯದ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ಸ್ಥಬ್ಧವಾಗಿರುವ ಕಾರಣ ಸಾಕಷ್ಟು ರೈತರು ಅಡಿಕೆಯನ್ನು ವಿಕ್ರಿ ಮಾಡಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಇದೀಗ ಮಾಧ್ಯಮಿಕ ಸಾಲದ ಕಂತು ಹಾಗೂ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಗಡುವು ಸಮೀಪಿಸುತ್ತಿದ್ದು, ಹಣಕಾಸು ಹೊಂದಾಣಿಕೆಗಾಗಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಅಡಿಕೆ ವಿಕ್ರಿ ಮಾಡುವುದು ಅತ್ಯಗತ್ಯವಾಗಿರುತ್ತದೆ.
ಪ್ರತಿದಿನ ಮೊದಲು ಹೆಸರು ನೋಂದಾಯಿಸಿದ 30 ಸದಸ್ಯರಿಗೆ ಅಡಿಕೆಯನ್ನು ನೇರವಾಗಿ ಮಾರಾಟ ಮಾಡುವ ಅವಕಾಶವಿದ್ದು, ಮುಂಚಿತವಾಗಿ ದೂರವಾಣಿ ಮೂಲಕ ಕರೆಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಅನುಮತಿಯನ್ನು ಪಡೆದುಕೊಂಡು ಅಡಿಕೆಯನ್ನು ಸಂಘಕ್ಕೆ ತರಬಹುದಾಗಿದೆ. ನೋಂದಾಯಿತ ಸದಸ್ಯರಿಗೆ ಅಡಿಕೆಯನ್ನು ತೆಗೆದುಕೊಂಡು ಬರಲು ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು. ಸಂಘಕ್ಕೆ ಅಡಿಕೆಯನ್ನು ತರುವಾಗ ಸ್ಥಳೀಯ ಅನುಮತಿ ಪತ್ರ, ಹಿಡುವಳಿ ಪ್ರತಿ, ಅಥವಾ ಪಹಣಿ ಪತ್ರಿಕೆಯನ್ನು ತಮ್ಮ ವಾಹನದಲ್ಲಿ ತಪ್ಪದೆ ತರಬೇಕು. ವಿಕ್ರಿಗೆ ಬರುವ ಸಮಯದಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಸೂಚಿಸಿದ ರೈತರು ಮಾತ್ರ ವಿಕ್ರಿಯ ಸ್ಥಳಕ್ಕೆ ಬರಬೇಕು. ಸಂಘದಲ್ಲಿ ಮಹಸೂಲು ಶಿಲ್ಕು ಇರಿಸಿರುವ ಸದಸ್ಯರು ಹಾಗೂ ಈಗಾಗಲೇ ವಿಕ್ರಿಗಾಗಿ ಅಡಿಕೆಯನ್ನು ತಂದಿಟ್ಟಿರುವ ಸದಸ್ಯರು ಯಾವ ಸಮಯದಲ್ಲಿ ಬೇಕಾದರೂ ನೇರ ಖರೀದಿಗೆ ತಮ್ಮ ಹೆಸರನ್ನು ನೋಂದಾಯಿಸುವ ಅವಕಾಶ ಹೊಂದಿದ್ದಾರೆ. ಈ ಸಮಯದಲ್ಲಿ ಮೊದಲನೇ ದರ್ಜೆಯ ಅಡಿಕೆಯನ್ನು ಮಾತ್ರ ಖರೀದಿಸಲಾಗುವುದು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಿಳಿಗೋಟು ಮತ್ತು ಚಾಲಿಕೆಂಪು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಹಳ್ಳಿಗಳ ಮಟ್ಟದಲ್ಲಿ ಸ್ಥಳಕ್ಕೇ ಹೋಗಿ ನೇರ ಖರೀದಿಗೆ ಸಹ ವ್ಯವಸ್ಥೆ ಮಾಡಲಾಗಿದ್ದು, ಟಿ.ಎಸ್.ಎಸ್. ಸದಸ್ಯರಿರುವ ಹಳ್ಳಿಗಳಲ್ಲಿ ಕನಿಷ್ಠ 10 ಜನ ಸದಸ್ಯರು ಒಪ್ಪಿಗೆ ಸೂಚಿಸುವ ಸ್ಥಳದಲ್ಲಿ ಬಂದು ಅಡಿಕೆಯನ್ನು ನೇರವಾಗಿ ಖರೀದಿಸಲಾಗುವುದು. ಹಳ್ಳಿಯಲ್ಲಿ ಪ್ರತಿಯೊಂದು ಸದಸ್ಯರಿಂದ ಗರಿಷ್ಠ 4 ಕ್ವಿಂಟಾಲ್ ಮೊದಲನೆ ದರ್ಜೆಯ ಅಡಿಕೆಯನ್ನು ಮಾತ್ರ ಖರೀದಿಸಲಾಗುವುದು. ಈ ಬಗ್ಗೆ ಸ್ಥಳೀಯವಾಗಿ ಹಳ್ಳಿಯ ಮುಂದಾಳುಗಳು ಕಛೇರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ವ್ಯವಸ್ಥೆಯನ್ನು ಟಿ.ಎಸ್.ಎಸ್. ಶಿರಸಿ, ಸಿದ್ದಾಪುರ, ಹಾಗೂ ಯಲ್ಲಾಪುರ ಶಾಖೆಗಳಿಲ್ಲಿಯೂ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅತ್ಯಗತ್ಯವಿರುವ ಹಿನ್ನೆಲೆಯಲ್ಲಿ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಮೂಲಕ ದಿನನಿತ್ಯದ ಅಗತ್ಯ ಜೀವನಾವಶ್ಯಕಗಳ ಪೂರೈಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದ್ದು, ಶಿರಸಿ ತಾಲೂಕಿನಾದ್ಯಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಅನುಮೋದಿತ ದಿನಸಿ ವರ್ತಕರ ಮೂಲಕ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ತಲುಪಿಸುವುದು ಹಾಗೂ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಆನ್‍ಲೈನ್ ಶಾಪಿಂಗ್ ಪೋರ್ಟಲ್ ಮೂಲಕ ಶಿರಸಿ ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಯ ಯಶಸ್ವಿಯಾಗಿದೆ. ಅದರಂತೆ ಇಲ್ಲಿಯ ವರೆಗೆ ಶಿರಸಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 36 ಸಹಕಾರಿ ಸಂಘಗಳು, 21 ಅನುಮೋದಿತ ದಿನಸಿ ವರ್ತಕರು ಶಿರಸಿ ನಗರ ಪ್ರದೇಶ ಮತ್ತು ಆನ್‍ಲೈನ್ ಮೂಲಕ 320 ಮನೆಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 336 ಮನೆಗಳಿಗೆ ನೇರವಾಗಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ಪೂರೈಸಲಾಗಿದೆ.

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಚನ್ನಮಲ್ಲ ಸ್ವಾಮಿಗಳು