ಹೊನ್ನಾವರ : ತಾಲೂಕಿನ ಸಾಲಿಕೇರಿ ಸ್ಮಶಾನದ ಪಕ್ಕದ ಗುಡ್ಡದ ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಎಸೆದು ಸಾಯಿಸಿದ್ದಲ್ಲದೆ ಮಗುವಿನ ಜನನವನ್ನು ಮುಚ್ಚಿಡುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಡ್ಡದಲ್ಲಿ ನವಜಾತ ಶಿಶು ಅನಾಥವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಪಟಗಾರ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವ ಗೌರವವನ್ನು ಹೆತ್ತವಳಿಗೆ ನೀಡುವ ಸಮಾಜದಲ್ಲಿ ಹೆಣ್ಣಿನ ಕುಲಕ್ಕೇ ಕಳಂಕ ತರುವ ಕೆಲಸ ಮಾಡಿದ ಪಾಪಿ ತಾಯಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಒಂದೇ ಒಂದು ಕರುಳ ಕುಡಿಗಾಗಿ ಜೀವನವೆಲ್ಲಾ ಪರಿತಪಿಸುತ್ತಿರುವ ಅದೆಷ್ಟೋ ಮಹಿಳೆಯರಿರುವಾಗ ಅದಾಗ ತಾನೇ ಜನಿಸಿದ ಮಗುವನ್ನು ಕೊಲ್ಲುವ ಆ ಹೆಣ್ಣಿನ ಹೃದಯ ಅದೆಷ್ಟು ಕಠೋರವಾಗಿರಬಹುದೆನ್ನುವ ಬಗ್ಗೆ ಜನರು ಆಡಿಕೊಳ್ಳುತ್ತಿದ್ದಾರೆ.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ನವಜಾತ ಶಿಶುವಿನ ಸಾವಿಗೆ ಕಾರಣರಾದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಮಗುವಿನ ತಾಯಿ ನೇತ್ರಾವತಿ ತಿಮ್ಮಪ್ಪ ಮುಕ್ರಿ, ನೇತ್ರಾವತಿಯ ಪ್ರಿಯಕರ ಕರ್ಕಿಯ ವಿಶ್ವನಾಥ ದೇವು ಮುಕ್ರಿ ಹಾಗೂ ಅಪರಾಧಕ್ಕೆ ನೆರವಾದ ಹುಡುಗಿಯ ತಂದೆ ತಾಯಿಯಾದ ತಿಮ್ಮಪ್ಪ ರಾಮ ಮುಕ್ರಿ ಹಾಗೂ ಪರಮೇಶ್ವರಿ ತಿಮ್ಮಪ್ಪ ಮುಕ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಸಾಂದರ್ಭಿಕ ಚಿತ್ರ ಬಳಸಿದೆ.