ಕುಮಟಾ: ವಿಶ್ವದಾದ್ಯಂತ ವ್ಯಾಪಕವಾಗಿ ಪಸರಿಸಿದ ಕೊವಿಡ್-19 ಕೊರೊನಾ ಮಹಾಮಾರಿ ಬೇನೆಯ ಹಿನ್ನೆಲೆಯಲ್ಲಿ ಮಾನ್ಯ ಸರಕಾರದ ಕಟ್ಟುನಿಟ್ಟಿನ ಆದೇಶಕ್ಕನುಗುಣವಾಗಿಯೂ, ಬೇನೆಯ ಶೀಘ್ರ ಶಮನದ ನಿಟ್ಟಿನಲ್ಲಿ ಸರಕಾರದಿಂದ ಸೂಚಿತ ಮಾರ್ಗಸೂಚಿಗಳ ಪರಿಪಾಲನೆಯಲ್ಲಿ ಸರಕಾರಕ್ಕೆ ಸಕ್ರಿಯ ಸಹಯೋಗ ನೀಡುವ ವಿಚಾರದಲ್ಲೂ, ಮೇಲಾಗಿ ನಮ್ಮೆಲ್ಲರ ಪ್ರಬಲ ಸುರಕ್ಷತೆಯ ಹಿತದೃಷ್ಟಿಯಿದಲೂ ಶ್ರೀ ಸನ್ನಿಧಿಯಲ್ಲಿ ವರ್ಷಂಪ್ರತಿ ಜರುಗುವಂಥ ಬಂಡಿ ಹಬ್ಬದ ಆಚರಣೆಯನ್ನು ಪ್ರಸ್ತುತ ವರ್ಷ ಅನಿವಾರ್ಯತೆಯಿಂದ ಸ್ಥಗಿತಗೊಳಿಸುವ ಪ್ರಮೇಯ ಬಂದಿರುವುದು ಮನಸ್ಸಿಗೆ ನೋವುಂಟುಮಾಡಿದೆ ಎಂದು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ದೇವರಹಕ್ಕಲ ಕುಮಟಾದ ಆಡಳಿತ ಧರ್ಮದರ್ಶಿ ಶ್ರೀ ಕೃಷ್ಣ ಬಾಬಾ ಪೈ ತಿಳಿಸಿದ್ದಾರೆ.
ಈ ಗಂಭೀರ ವಿಷಯದ ಕುರಿತು ಶ್ರೀ ದೇವಿಯಲ್ಲಿ ಇತ್ತೀಚಿಗೆ ವಾಡಿಕೆಯಂತೆ ಹೂ ಪ್ರಸಾದ ಹಚ್ಚಿ ಕೇಳಿದಾಗ, ಪ್ರಸನ್ನತೆಯ ಸಮ್ಮತಿ ಮತ್ತು ಗ್ರಾಮ ರಕ್ಷಣಾ ಅನುಗ್ರಹ ಪ್ರಸಾದ ಲಭಿಸಿರುತ್ತದೆ ಎಂದೂ ಶ್ರೀ ದೇವಿಯ ಪ್ರೇರಣೆಯಂತೆ ಈ ವರ್ಷ ಬಂಡಿ ಹಬ್ಬದ ಸಮಯಾವಧಿಯಲ್ಲಿ ಎ.29 ರಿಂದ ಮೇ 6 ರ ವರೆಗೆ ಪರಂಪರೆಯಿಂದ ಮಾಡಿಕೊಂಡು ಬಂದಿರುವಂಥ ಧಾರ್ಮಿಕ ವಿಧಿ ವಿಧಾನ, ಕಲಶಗಿಂಡಿ, ಮುದ್ರೆಗಳ ಪೂಜೆಗಳನ್ನು ಶ್ರೀ ದೇವಿಯ ಸನ್ನಿಧಿಯಲ್ಲೇ ಸಾಂಕೇತಿಕವಾಗಿ ಜರುಗಿಸಿ ಸಮಸ್ತ ಭಕ್ತಾದಿಗಳ, ಅರ್ಚಕರ, ಮುದ್ರೆದಾರರ ಮತ್ತು ಸೇವಾಕಾರರ ಉತ್ತರೋತ್ತರ ಕಲ್ಯಾಣ, ಆರೋಗ್ಯ, ಐಶ್ವರ್ಯ, ನೆಮ್ಮದಿ ಬಗ್ಗೆ ಶ್ರೀ ಸನ್ನಿಧಿಯಲ್ಲಿ ಪ್ರಾರ್ಥಿಸಲಾಗುವದೆಂದೂ ತಿಳಿಸಿದ್ದಲ್ಲದೇ, ಶ್ರೀ ದೇವಿಯ ಅನುಗ್ರಹದಿಂದ ವಿಶ್ವದಲ್ಲಿ ವ್ಯಾಪಿಸಿರುವ ಮಾರಿಬೇನೆಯ ಶೀಘ್ರ ನಿರ್ಮೂಲನೆಯಾಗಿ, ಸಮಸ್ತ ವಿಶ್ವ ಬಾಂಧವರು ಸುಖ, ಶಾಂತಿ ನೆಮ್ಮದಿಯಿಂದ, ಸಧೃಡ ಆರೋಗ್ಯವಂತರಾಗಿ ಬಾಳಲೆಂದು ಶ್ರೀ ಸನ್ನಿಧಿಯಲ್ಲಿ ಇನ್ನೊಮ್ಮೆ ಪ್ರಾರ್ಥಿಸಲಾಗುವುದೆಂದು ಸಮಸ್ತ ಭಕ್ತರ ಸಹೃದಯಿ ಸಹಯೋಗವನ್ನು ಅಪೇಕ್ಷಿಸಿರುವುದನ್ನು ಕುಮಟಾ ನಗರದ ಗ್ರಾಮದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಆಡಳಿತ ಪ್ರಕಟಿಸಿದೆ.