ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ

ಶ್ರೀ ಗಣೇಶನನ್ನು ನಾವು ಹೇಗೆ ಭಕ್ತಿ ಭಾವದಿಂದ ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣೇಶನ ವಿಸರ್ಜನೆಯನ್ನು ಅಯೋಗ್ಯ ಪದ್ಧತಿಯಲ್ಲಿ ಮಾಡುವುದರಿಂದ ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ. ಆದುದರಿಂದ ನಾವೆಲ್ಲಾ ಹೇಗೆ ತಪ್ಪು ಆಚರಣೆಗಳನ್ನು ತಡೆಗಟ್ಟುವುದು, ಯೋಗ್ಯ ಆಚರಣೆಗಳನ್ನು ಮಾಡುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳೊಣ..
ಸುಖಕರ್ತಾ ಮತ್ತು ವಿಘ್ನಹರ್ತಾ ಎಂದು ಶ್ರೀ ಗಣೇಶನ ಪೂಜೆಯನ್ನು ಭಾವಪೂರ್ಣವಾಗಿ ಮಾಡಿ ಅವನ ಕೃಪಾಶೀರ್ವಾದವನ್ನು ಪಡೆಯಬೇಕೆಂದು ಶಾಸ್ತ್ರಗಳನ್ನು ಹೇಳಲಾಗಿದೆ. ಆದರೆ ಇಂದು ಗಣೇಶೋತ್ಸವದ ಸಂದರ್ಭದಲ್ಲಿ ನಡೆಯುತ್ತಿರುವ ತಪ್ಪು ಆಚರಣೆಗಳ ಬಗ್ಗೆ ಧರ್ಮಶಾಸ್ತ್ರೀಯ ದೃಷ್ಟಿಕೋನಗಳನ್ನು ತಿಳಿದುಕೊಳ್ಳುವುದು ಅವಶ್ಯವಿದೆ.
ಅನೈಸರ್ಗಿಕ ಮೂರ್ತಿ ಉಪಯೋಗಿಸಬೇಡಿ:
ಗಣಪತಿಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ತಯಾರಿಸಿದರೆ ಅದರಲ್ಲಿ ಗಣೇಶತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತ್ತೆ
ಇತ್ತೀಚೆಗೆ ಶ್ರೀ ಗಣೇಶ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿ ಅದನ್ನು ಪೂಜಿಸಿ ವಿಸರ್ಜನೆ ಮಾಡಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಕೆರೆ, ನದಿ, ಸಮುದ್ರ ಮುಂತಾದವುಗಳ ನೀರು ಕಲುಷಿತಗೊಳ್ಳುತ್ತದೆ. ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಬೇರೆ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ! ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ಸಿರಿಂಜ್ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.
ನೈಸರ್ಗಿಕ ಗಣೇಶ ಮೂರ್ತಿ ಉಪಯೋಗಿಸುವುದರಿಂದ ಆಗುವ ಲಾಭಗಳು :

ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿದೆ. ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಮಾತ್ರ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣೇಶ ಮೂರ್ತಿಯಲ್ಲಿ ವ್ಯತ್ಯಾಸವಿದೆ. ಅ. ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ, ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. ಆದ್ದರಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ. ಇತ್ತೀಚೆಗೆ ಕಸದಿಂದ ರಸ ಎಂದು ವಿಶಿಷ್ಟವಾದ ಕ್ಲೇ ಗಣಪತಿ, ಪೇಪರ್ ಗಣಪತಿ ಮೂರ್ತಿ ತಯಾರಿಸಿ ವಿಸರ್ಜನೆ ಮಾಡಲಾಗುತ್ತಿದೆ, ಹೀಗೆ ಅಶಾಸ್ತ್ರೀಯ ರೀತಿಯಲ್ಲಿ ಮೂರ್ತಿ ತಯಾರಿಸುವುದರಿಂದ ಪರಿಸರಕ್ಕೂ ಮಾರಕವಾಗುತ್ತದೆ, ಅದೇ ರೀತಿ ಪೂಜಕನಿಗೆ ಗಣೇಶತತ್ತ್ವದ ಲಾಭವು ಆಗುವುದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಹಾಗೆಯೇ ಇತರ ಕೃತಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು.
ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.

RELATED ARTICLES  ಶಾರದಾ ಶೆಟ್ಟಿಯವರ ಬಿರುಸಿನ‌ ಪ್ರಚಾರ: ಚುನಾವಣಾ ಕಣದಲ್ಲಿ ಗೆಲುವಿಗೆ ನಡೆದಿದೆ ಪ್ರಯತ್ನ

ಗಣೇಶಮೂರ್ತಿಯ ವಿಡಂಬನೆ ತಡೆಗಟ್ಟಿರಿ:
ಕೆಲವು ಗಣೇಶ ಮಂಡಳಿಗಳು ಬೃಹತ್ ಮೂರ್ತಿಗಳನ್ನು ಸ್ಥಾಪಿಸುತ್ತಾರೆ, ಇದರಿಂದಾಗಿ ಅವುಗಳನ್ನು ವಿಸರ್ಜನೆ ಮಾಡುವಾಗ ಮೂರ್ತಿಭಗ್ನಗುವುದು, ಹೀಗೆ ಅನೇಕ ಅಡಚಣೆಗಳಾಗುವ ಸಾಧ್ಯತೆಯಿರುತ್ತದೆ. ಕೆಲವರು ಚಿತ್ರ-ವಿಚಿತ್ರ ಆಕಾರದ ಗಣೇಶ ಮೂರ್ತಿಗಳನ್ನು ಉಪಯೋಗಿಸುತ್ತಾರೆ, ಕೆಲವರು ಕ್ರಿಕೆಟ್ ಆಡುವ, ಶಾಲಾ ಸಮವಸ್ತ್ರದಲ್ಲಿರುವ ಗಣಪತಿಯನ್ನು ತಯಾರಿಸುತ್ತಾರೆ ಇದು ದೇವರ ವಿಡಂಬನೆಯೇ ಆಗಿದೆ, ಶ್ರೀ ಗಣೇಶ ಮೂರ್ತಿಯ ಮೂಲರೂಪ ಮತ್ತು ಆಕಾರದ ಹೊರತಾಗಿ ಹೇಗೆ ಮೂರ್ತಿ ತಯಾರಿಸುವುದು ತಪ್ಪಾಗಿದೆ. ಆದ್ದರಿಂದ ನಾವು ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯನ್ನೇ ಉಪಯೋಗಿಸಬೇಕು.
ಅನಾವಶ್ಯಕ ವಿದ್ಯುತ್ ದೀಪಗಳು, ಸೌಂಡ್ಸ್ ನ್ನು ತಡೆಗಟ್ಟಿರಿ :
ಶ್ರೀ ಗಣೇಶನ ಶೃಂಗಾರ ಮಾಡುವಾಗ ಅನಾವಶ್ಯಕ ವಿದ್ಯುತ್ ದೀಪಗಳನ್ನು ಉಪಯೋಗಿಸಬಾರದು. ನಮ್ಮ ದೇಶದಲ್ಲಿ ವಿದ್ಯುತ್‌ನ ಕೊರತೆಯಿದೆ. ಅಷ್ಟಲ್ಲದೇ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ಸಾಲದ ಹೊರೆಯಿದೆ. ನಾವು ಅನಾವಶ್ಯಕ ವಿದ್ಯುತ್‌ನ್ನು ಕೇವಲ ಅಲಂಕಾರಕ್ಕಾಗಿ ಖರ್ಚು ಮಾಡುವುದರಿಂದ ಒಂದು ರೀತಿಯಲ್ಲಿ ರಾಷ್ಟ್ರದ್ರೋಹವೇ ಆಗುತ್ತದೆ. ಶ್ರೀ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ದೊಡ್ಡ ಧ್ವನಿಯಲ್ಲಿ ಚಲನಚಿತ್ರದ ಗೀತೆಗಳನ್ನು ಹಾಕಿ, ಡಿ.ಜೆ ಸೌಂಡ್ಸ್ ಉಪಯೋಗಿಸಿ ಅಯೋಗ್ಯ ರೀತಿಯಲ್ಲಿ ನೃತ್ಯ ಮಾಡುವುದರಿಂದ ಶಬ್ದಮಾಲಿನ್ಯವಾಗುತ್ತದೆ. ಮದ್ಯಪಾನ ಮಾಡಿ ಇತರರಿಗೆ ತೊಂದರೆ ಕೊಡುವುದು, ಹೀಗೆ ಅಯೋಗ್ಯ ರೀತಿಯಲ್ಲಿ ಆಚರಣೆಗಳನ್ನು ಮಾಡುವುದರಿಂದ ಶ್ರೀ ಗಣೇಶೋತ್ಸವ ಆಚರಿಸುವ ಮೂಲ ಉದ್ದೇಶವೇ ನಾಶವಾದಂತೆ ಆಗುವುದು ಹಾಗೆಯೇ ಶ್ರೀ ಗಣೇಶನ ಕೃಪೆಯು ಆಗಲಾರದು, ಬದಲಾಗಿ ಪಾವಿತ್ರ್ಯತೆ ನಾಶವಾಗಿ ದೇವರ ಅವಕೃಪೆಯು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗಣೇಶೋತ್ಸವ ಸಂದರ್ಭದಲ್ಲಿ ನಡೆಯುವ ತಪ್ಪು ಆಚರಣೆಗಳಲ್ಲಿ ನಾವು ಯಾವುದೇ ಕಾರಣಕ್ಕೂ ಸಹಭಾಗಿಗಳಾಗದಿರೋಣ.
ಶೃಂಗಾರಕ್ಕಾಗಿ ಥರ್ಮಾಕಾಲ್ ಬಳಸಬೇಡಿ :
ಮಂಟಪವನ್ನು ಶೃಂಗರಿಸಲು ಕೃತಕ ಥರ್ಮಾಕಾಲ್ ಅಥವಾ ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು. ಥರ್ಮಾಕೋಲ್ ರಾಸಾಯನಿಕ ಪ್ರಕ್ರಿಯೆಯಿಂದ ನಿರ್ಮಾಣವಾಗಿದ್ದರಿಂದ ರಜತಮಯುಕ್ತವಾಗಿದೆ, ಇಂತಹ ರಜತಮಯುಕ್ತ ವಸ್ತು ಸಾತ್ತ್ವಿಕ ಸ್ಪಂದನಗಳನ್ನು ಗ್ರಹಿಸಲಾರದು, ನೀರಿನಲ್ಲಿ ವಿರ್ಜಿಸುವಾಗ ಮಾಲಿನ್ಯವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಮಂಟಪ, ಶೃಂಗಾರಕ್ಕಾಗಿ ಕೃತಕ ರಾಸಾಯನಿಕ ವಸ್ತುಗಳನ್ನು ಬಳಸಬಾರದು.
ಪಟಾಕಿಗಳನ್ನು ಸಿಡಿಸಬೇಡಿರಿ:
ಪಟಾಕಿಗಳ ಧ್ವನಿ ಹಾಗೂ ಹೊಗೆಯಿಂದ ಬೃಹತ್ಪ್ರಮಾಣದಲ್ಲಿ ಧ್ವನಿ ಹಾಗೂ ವಾಯು ಪ್ರದೂಷಣೆಯಾಗುತ್ತದೆ. ಇದರಿಂದ ಶ್ವಾಸಕೋಶದ ಹಾಗೂ ಇನ್ನಿತರ ಭಯಂಕರ ಖಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ. ಶಬ್ದದಿಂದ ಸಣ್ಣ ಮಕ್ಕಳು, ರೋಗಿಗಳು, ವಿದ್ಯಾರ್ಥಿಗಳು ಎಲ್ಲರಿಗೂ ತೊಂದರೆಗಳಾಗುತ್ತದೆ. ಪಟಾಕಿಗಳಿಂದ ರಜ-ತಮ ಹೆಚ್ಚಾಗುತ್ತದೆ. ರಸ್ತೆಯ ಮೇಲೆ ಪಟಾಕಿಗಳನ್ನು ಸಿಡಿಸುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅಷ್ಟೇ ಅಲ್ಲ ಇತರರಿಗೆ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಗಣೇಶೊತ್ಸವದ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪಟಾಕಿಗಳನ್ನು ಸಿಡಸಬಾರದು.
ಬಲವಂತ ಹಣ ವಸೂಲಿ ಮಾಡಬಾರದು:
ಗಣೇಶೋತ್ಸವಕ್ಕಾಗಿ ಸಮಾಜದಲ್ಲಿ ಅರ್ಪಣೆ ಸಂಗ್ರಹ ಮಾಡುವಾಗ ಬಲವಂತವಾಗಿ ಹಣ ವಸೂಲಿ ಯಾವುದೇ ಕಾರಣಕ್ಕೂ ಮಾಡಬಾರದು, ಬದಲಾಗಿ ಭಕ್ತರು ಭಕ್ತಿಯಿಂದ ನೀಡಿದ ಅರ್ಪಣೆಯನ್ನು ಸ್ವೀಕರಿಸಬೇಕು.
ಶ್ರೀ ಗಣೇಶನ ಅವಮಾನ ತಡೆಯುವುದು ಗಣೇಶಭಕ್ತಿಯೇ ಆಗಿದೆ:
ಶ್ರೀ ಗಣೇಶನ ಚಿತ್ರವುಳ್ಳ ಹೊದಿಕೆಗಳಿರುವ ಸಿಹಿತಿಂಡಿಗಳನ್ನು, ಊದುಬತ್ತಿ, ಇನ್ನಿತರ ಪೂಜಾ ಸಾಮಾಗ್ರಿಗಳನ್ನು ಖರೀದಿಸಬೇಡಿರಿ.
ಶ್ರೀ ಗಣೇಶನನ್ನು ಕಾರ್ಟೂನ್‌ನಂತೆ ತೋರಿಸಿ ಜಾಹೀರಾತಿಗಾಗಿ ಉಪಯೋಗಿಸುವ ಕಂಪನಿಗಳನ್ನು, ಪ್ರಸಾರ ಮಾಧ್ಯಮಗಳನ್ನು ಕಾನೂನುರಿತ್ಯಾ ವಿರೋಧಿಸಿರಿ.
ಗಣೇಶೋತ್ಸವನ್ನು ಶಾಸ್ತ್ರಾನುಸಾರ ಯೋಗ್ಯ ರೀತಿಯಲ್ಲಿ ಆಚರಿಸಿದರೆ ಶ್ರೀ ಗಣೇಶನ ಕೃಪೆ ನಮ್ಮೆಲ್ಲರ ಮೇಲೆ ಆಗುವುದು, ಅದ್ದರಿಂದ ನಾವೆಲ್ಲಾ ಆದರ್ಶ ಗಣೇಶೋತ್ಸವ ಆಚರಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗೋಣ.

RELATED ARTICLES  ಆರ್ಯ ಈಡಿಗ ನಾಮಧಾರಿ ನೌಕರರ ಸಂಘ ಕುಮಟಾದ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರ

ಶ್ರೀ ಗುರುಪ್ರಸಾದ,
ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂ.ಕ್ರ : ೯೩೪೩೦೧೭೦೦೧