ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಪ್ರತಿ ಅಮವಾಸ್ಯೆಗೆ (ಕಾರ್ತಿಕ ಅಮವಾಸ್ಯೆಯಿಂದ ಚೈತ್ರ ಅಮವಾಸ್ಯೆಯವರೆಗೆ ನಡೆಯುವಂತಹ ಪಾರಂಪರಿಕ ರಥೋತ್ಸವದಲ್ಲಿ) ಚೈತ್ರ ಬಹುಳ ಅಮವಾಸ್ಯೆಯ ರಥೋತ್ಸವವನ್ನು ಕೋಮಾರಪಂತ ಸಮಾಜದ ಬಾಂಧವರು ನಡೆಸಿಕೊಂಡು ಬರುತ್ತಿದ್ದರು. ಬಹಳ ಪೂರ್ವದಲ್ಲಿ ಆ ಕುರಿತಾಗಿ ಒಂದು ಒಡಂಬಡಿಕೆ ಶ್ರೀದೇವಾಲಯದ ಆಡಳಿತದೊಂದಿಗೆ ಮತ್ತು ಕೋಮಾರಪಂತ ಸಮಾಜದೊಂದಿಗೆ ಸ್ವಸಂತೋಷದಿಂದ ಆಗಿತ್ತು.
ಆದರೆ ಯಾವುದೋ ಕಾಲಘಟ್ಟದಲ್ಲಿ ಈ ಸೇವೆ ಕೋಮಾರಪಂತ ಸಮಾಜದಿಂದ ಸ್ಥಗಿತಗೊಂಡಿತ್ತು. ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಈ ಸೇವೆ ಕೋಮಾರಪಂತ ಸಮಾಜದವರಿಂದ ಪುನಃ ಅಸ್ತಿತ್ವಕ್ಕೆ ಬಂದು ಕಳೆದ ಕೆಲವು ವರ್ಷಗಳಿಂದ ತುಂಬ ಸಂಭ್ರಮ, ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆದುಕೊಂಡು ಬರುತ್ತಿತ್ತು.
ಪ್ರಸ್ತುತ ಕೊರೋನಾ ಮಹಾಮಾರಿಯ ಉಪದ್ರವದ ಹಿನ್ನಲೆಯಲ್ಲಿ ಎಲ್ಲಾ ಸಾಂಘಿಕ ಚಟುವಟಿಕೆಗಳನ್ನು ನಿಲ್ಲಿಸಲೇ ಬೇಕಾಗಿರುವುದರಿಂದ ಈ ರಥೋತ್ಸವ ಕಾರ್ಯಕ್ರಮವನ್ನು ಕೂಡ ಜಗದೀಶ್ವರನಾದ ಮಹಾಬಲೇಶ್ವರನನ್ನು ಪ್ರಾರ್ಥಿಸಿಕೊಂಡು ಸದ್ಯಕ್ಕೆ ಮುಂದೂಡಲಾಗಿದೆ. ಶಾಸ್ತ್ರ ಮತ್ತು ಪರಂಪರೆಯನ್ನು ಮನ್ನಿಸಿ ಪರಮಪೂಜ್ಯರ ಅನುಗ್ರಹ ಪಡೆದು ಮುಂದೆ ಹೇಗೆ ಮಾಡಬೇಕೆಂದು ನಿರ್ಧರಿಸಲಾಗುವುದು.
ಕೋಮಾರಪಂತ ಸಮಾಜದ ಗೌರವಾನ್ವಿತ ಭಜಕರು ಈ ಸಂದರ್ಭದಲ್ಲಿ ಸಹಕರಿಸಬೇಕಾಗಿ ಅವರನ್ನು ವಿನಂತಿಸಿಕೊಳ್ಳಲಾಗಿದೆ. ಮತ್ತು ಸಕಲ ಸಮುದಾಯದಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ಈ ಬೇಸಿಗೆಯಲ್ಲಿ ರಥೋತ್ಸವವನ್ನು ನಡೆಸುವ ಆಲೋಚನೆಯನ್ನು ಮುಂದೂಡಿ ಒಂದೆರಡು ದಿನಗಳಲ್ಲಿ ರಥವನ್ನು ಬಿಚ್ಚಿ ಇಡಲಾಗುವುದು.