ಕುಮಟಾ: ತಾಲ್ಲೂಕಿನ ವಿವಿಧ ಭಾಗಗಳಲ್ಲಿರುವ ವಿಶ್ವಕರ್ಮ ಸಮಾಜದ ಬಡವರಿಗೆ ಲಾಕ್‌ಡೌನ್‌ನಿಂದ ಬರೆ ಎಳೆದಂತಾಗಿದ್ದು, ಆರ್.ಕೆ. ಪ್ರೊಡಕ್ಷನ್‌ನ ಸ್ಥಾಪಕರಾದ ಚಂದಾವರದ ರಾಜೇಶ ರಮೇಶ ಆಚಾರ್ಯ ಅವರು ಕಷ್ಟದಲ್ಲಿರುವವರ ನೆರವಿಗೆ ನಿಂತಿದ್ದಾರೆ. ನಾರಾರು ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಮಟಾ ಪಟ್ಟಣ, ಹೆಗಡೆ, ಹಳಕಾರ, ಸಿದ್ದನಬಾವಿ ಮುಂತಾದ ಭಾಗಗಳಲ್ಲಿ ಶುಕ್ರವಾರ ಅಗತ್ಯ ಸಾಮಗ್ರಿಗಳನ್ನು ತಮ್ಮ ವೈಯಕ್ತಿಕ ಹಣದಿಂದ ನೀಡಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿಗೂ ತಂಪು ಪಾನೀಯಗಳನ್ನು ವಿತರಿಸಿದ್ದಾರೆ. ಇವರು ಸದ್ಯ ನ್ಯೂಜಿಲ್ಯಾಂಡ್‌ನಲ್ಲಿ ವಾಸವಾಗಿದ್ದು ತಮ್ಮ ಸ್ನೇಹಿತರ ನೆರವಿನಿಂದ ಮನೆಮನೆಗಳಿಗೆ ಪೂರೈಸುವ ಕಾರ್ಯ ಮಾಡಿದ್ದಾರೆ.
’ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇಡೀ ತಾಲ್ಲೂಕಾಡಳಿತದ ಪರಿಶ್ರಮದಿಂದ, ಹಗಲಿರುಳು ಹೋರಾಟದಿಂದ ಕೋವಿಡ್ 19 ನಿಯಂತ್ರಣದಲ್ಲಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂಜಿಲ್ಯಾಂಡ್‌ನಿಂದ ಮೊಬೈಲ್ ಕರೆ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ’ವಿಶ್ವದೆಲ್ಲೆಡೆ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿದೆ. ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಜಿಲ್ಲಾಧಿಕಾರಿಗಳು ಸೋಂಕಿನ ನಿಯಂತ್ರಣದಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಜನರ ಭೀತಿಯನ್ನು ಸಾಕಷ್ಟು ಮಟ್ಟಿಗೆ ದೂರ ಮಾಡಿದ್ದಾರೆ. ತಾಲ್ಲೂಕಿನ ಆಶಾ ಕಾರ್ಯಕರ್ತೆಯರಂತೂ ಸಮಾಜಕ್ಕೆ ತಮ್ಮ ಅಗತ್ಯತೆಯನ್ನು ಪರಿಶ್ರಮದ ಮೂಲಕವೇ ತೋರಿಸಿದ್ದಾರೆ’ ಎಂದು ಅಭಿನಂದನೆಗಳನ್ನು ಸಲ್ಲಿಸಿದರು.
’ಲಾಕ್‌ಡೌನ್‌ನಿಂದ ಜನರು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರಕ್ಕೂ ಆರ್ಥಿಕ ಹಿನ್ನಡೆಯಾಗಿದೆ. ಹಾಗಾಗಿ ನಾನು ವೈಯಕ್ತಿಕವಾಗಿ ಸಾಧ್ಯವಾದಷ್ಟು ಸಹಾಯ ಮಾಡುವ ದಿಸೆಯಲ್ಲಿ ಬಡಬಗ್ಗರಿಗೆ ದಿನಸಿ ಕಿಟ್‌ಗಳನ್ನು ವಿತರಿಸುತ್ತಿದ್ದೇನೆ. ಸ್ನೇಹಿತ ರಾಜು ಆಚಾರ್ಯ ಹಾಗೂ ವಿಶ್ವ ಆಚಾರ್ಯ ಅವರು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ’ ಎಂದು ತಿಳಿಸಿದರು.
’ಲಾಕ್‌ಡೌನ್ ನಿಯಮಗಳನ್ನು ಮೀರದೇ ಜನರು ಶಾರೀರಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪರಿಸ್ಥಿತಿ ಬಿಗಡಾಯಿಸಲು ಅವಕಾಶ ಮಾಡಿಕೊಡಬಾರದು. ಸರ್ಕಾರವೂ ಕೂಡ ಜನರಿಗೆ ಅಕ್ಕಿ, ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಿದೆ. ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.