ಮಾರುಕಟ್ಟೆಯಿಲ್ಲದೇ ಕಂಗೆಟ್ಟಿದ್ದ ತಾಲ್ಲೂಕಿನ ಪೂರ್ವಭಾಗದ ಅನಾನಸ್ ಬೆಳೆಗಾರರು ಕೊಂಚ ನಿರಾಳಗೊಂಡಿದ್ದಾರೆ. ಅನಾನಸ್‌ಗೆ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಪ್ರಾರಂಭವಾಗಿದೆ.

ಬನವಾಸಿ ಅನಾನಸ್‌ಗೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆಯಾಗಿದ್ದು, ಲಾಕ್‌ಡೌನ್ ಕಾರಣಕ್ಕೆ ಹಣ್ಣಿನ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಅನಾನಸ್‌ ಗದ್ದೆಯಲ್ಲೇ ಹಣ್ಣಾಗುತ್ತಿರುವುದನ್ನು ಕಂಡು ಬಂಡವಾಳ ಹೂಡಿ ಬೆಳೆ ತೆಗೆದಿರುವ ಬೆಳೆಗಾರರು ಚಿಂತಿತರಾಗಿದ್ದರು. ಹಣ್ಣಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ಬೆಳೆಗಾರರು, ಅಧಿಕಾರಿಗಳನ್ನು ವಿನಂತಿಸಿದ್ದರು. ಇದರ ಪರಿಣಾಮವಾಗಿ ಬನವಾಸಿಯಲ್ಲಿರುವ ಎರಡು ಹಾಗೂ ಸಿದ್ದಾಪುರದಲ್ಲಿರುವ ಒಂದು ಅನಾಸಸ್ ಸಂಸ್ಕರಣಾ ಘಟಕಗಳು ಕಾರ್ಯಾರಂಭ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದರು. ಆದರೆ, ಬನವಾಸಿ ಭಾಗದಲ್ಲಿ ದಿನವೊಂದಕ್ಕೆ ಸುಮಾರು 100 ಟನ್ ಹಣ್ಣು ಕಟಾವಿಗೆ ಬರುತ್ತದೆ. ಸಂಸ್ಕರಣಾ ಘಟಕಗಳಿಂದ ಇಷ್ಟು ಪ್ರಮಾಣದ ಹಣ್ಣನ್ನು ಪ್ರತಿದಿನ ಸಂಸ್ಕರಿಸಲು ಸಾಧ್ಯವಾಗದ ಕಾರಣ, ರೈತರು ಮತ್ತೆ ಬೇಸರಗೊಂಡಿದ್ದರು.

RELATED ARTICLES  ಬಾಡದ ಗುಡೇಅಂಗಡಿಯ ಗ್ರಾಮಸ್ಥರಿಂದ ಸ್ಮಶಾನ ಭೂಮಿ ಸ್ವಚ್ಚತೆ

ಈಗ ಹಾಪ್‌ಕಾಮ್ಸ್‌ ವಿಶೇಷ ಆಸಕ್ತಿ ತೋರಿದ ಪರಿಣಾಮ ವಿವಿಧ ಸಂಘಟನೆಗಳು ಅನಾನಸ್ ಖರೀದಿಗೆ ಮುಂದೆ ಬಂದಿವೆ. ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದು ಸುಮಾರು 250 ಟನ್‌ನಷ್ಟು ಅನಾನಸ್ ಖರೀದಿಸಿದೆ. ಹಣ್ಣಿನ ಗುಣಮಟ್ಟ ಪರಿಶೀಲಿಸಿ, ಹೆಚ್ಚು ಹಣ್ಣು ಖರೀದಿಸುವ ಭರವಸೆ ನೀಡಿದೆ. ಸ್ಥಳೀಯ ಮಧುಮುತ್ರ ಹಾಗೂ ಮಧುಕೇಶ್ವರ ರೈತಮಿತ್ರ ಸಂಘಗಳು ಅನಾನಸ್ ಹಾಗೂ ಕಲ್ಲಂಗಡಿ ಖರೀದಿಸುತ್ತಿವೆ. ಕದಂಬ ಸೌಹಾರ್ದ ಪ್ರತಿದಿನ ಮೂರು ಟನ್ ಬಾಳೆ ಮತ್ತು ಶುಂಠಿ ಖರೀದಿಸುತ್ತಿದೆ.

‘ರೈತರು ವಾಹನದ ವೆಚ್ಚ ಭರಿಸಿಕೊಂಡು ಹಣ್ಣು ಸಾಗಾಟ ಮಾಡುವುದರಿಂದ ಕೆ.ಜಿ.ಯೊಂದಕ್ಕೆ ₹6–7 ದರ ಸಿಗುತ್ತಿದೆ. ಗದ್ದೆಯಲ್ಲಿ ಕೊಳೆತು ಮಣ್ಣಾಗುವುದಕ್ಕಿಂತ ಈ ಇಷ್ಟಾದರೂ ಮಾರಾಟವಾಗುವುದು ಕೊಂಚ ಸಮಾಧಾನ ತಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಎರಡು ಕೆ.ಜಿ.ಗಿಂತ ದೊಡ್ಡ ಗಾತ್ರದ ಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಹಣ್ಣಿಗೆ ಬೇಡಿಕೆ ಹೆಚ್ಚು’ ಎನ್ನುತ್ತಾರೆ ಬೆಳೆಗಾರ ಗಣಪತಿ ನಾಯ್ಕ.

RELATED ARTICLES  ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ ಎಂದ ಕಾಗೇರಿ: ರಂಗೇರಿತು ಚುನಾವಣಾ ಕಣ.

‘ಕಾರ್ಮಿಕರಿಗೆ ನೀಡುವ ಕಿಟ್ ಜೊತೆಗೆ ಅನಾನಸ್ ನೀಡಲು ಕಾರ್ಮಿಕ ಇಲಾಖೆ ಹಣ್ಣು ಖರೀದಿಸುವುದಾಗಿ ಹೇಳಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ವಿಶೇಷ ಕಳಕಳಿಯಿಂದ ಇದು ಸಾಧ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಫ್ಯಾಕ್ಟರಿಗಳಲ್ಲಿ ಸಣ್ಣ ಹಣ್ಣಿಗೆ ಮಾತ್ರ ಬೇಡಿಕೆ. ಹೀಗಾಗಿ, ದೊಡ್ಡ ಹಣ್ಣು ಹೊಲದಲ್ಲೇ ಉಳಿಯುತ್ತದೆ. ಬೆಂಗಳೂರಿನಿಂದ ಬೇಡಿಕೆ ಬಂದಿದ್ದಕ್ಕೆ ಗದ್ದೆಯಲ್ಲಿದ್ದ ಸ್ವಲ್ಪ ಬೆಳೆ ಖಾಲಿಯಾಯಿತು. ಕಳೆದ ವರ್ಷ ಅನಾನಸ್ ಕೆ.ಜಿ.ಯೊಂದಕ್ಕೆ ಗರಿಷ್ಠ ₹20 ದರ ದೊರೆತಿತ್ತು’ ಎಂದು ಬೆಳೆಗಾರ ಸಂತೋಷ ಕಲಕರಡಿ ಹೇಳಿದರು.