ಕುಮಟಾ : ಸೇವೆ ಎನ್ನುವ ಪದಕ್ಕೆ ತಮ್ಮ ಕಾಯಕದ ಮೂಲಕ ಇಂದು ನಿಜವಾದ ಅರ್ಥ ಕೊಟ್ಟವರು ಮಹಿಳಾ ಮಣಿಗಳಾದ ಆಶಾ ಕಾರ್ಯಕರ್ತೆಯರು. ವಿಶ್ವದ ತುಂಬೆಲ್ಲಾ ಕೊರೋನಾ ವೈರಸ್ ಹರಡುತ್ತಿರುವ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ನೆನಪಾಗುತ್ತಿದ್ದಾರೆ ಆಶಾ ಕಾರ್ಯಕರ್ತೆಯರು. ಸರ್ಕಾರ ಕೊಡುತ್ತಿರುವ ಅಲ್ಪ ಸ್ವಲ್ಪ ಗೌರವ ಸಂಭಾವನೆ ಪಡೆದು ತಮ್ಮ ಜೀವನವನ್ನು ಸಾಗಿಸುತ್ತಿರುವ ಈ ಆಶಾ ಕಾರ್ಯಕರ್ತೆಯರು ಇಂದು ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಶೃದ್ಧೆಯಿಂದ ತೊಡಗಿಸಿಕೊಂಡು ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ.
ಪ್ರತಿ ನಿತ್ಯ ಸುಡುಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ತೆರಳಿ ಜನರ ಆರೋಗ್ಯದ ಕುರಿತು ವಿಚಾರಿಸಿ ಸುರಕ್ಷತಾ ಕ್ರಮದ ಕುರಿತು ಮಾಹಿತಿಯನ್ನು ನೀಡುತ್ತಾ ಸೋಂಕಿತರನ್ನು ಗುರುತಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವ ಕಲಭಾಗ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಆಶಾ ಕಾರ್ಯಕರ್ತೆಯರಿಗೆ ಕಮಟಾದ ಅಳ್ವೇದಂಡೆಯ ನವಚೇತನ ನಾಮಧಾರಿ ಯುವಕ ಸಂಘದ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಕೇಶವ ನಾಯ್ಕ ಹಾಗೂ ನವಚೇತನ ಯುವಕ ಸಂಘದ ಅಧ್ಯಕ್ಷರು ,ಊರಿನ ಹಿರಿಯರು ,ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.