ಕಲಭಾಗ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಸುಂದರ ಪ್ರಕೃತಿಯ ಸ್ವಚ್ಛ ಪರಿಸರದ ಊರು ಅಳ್ವೇದಂಡೆ.ಅರಬ್ಬೀ ಸಮುದ್ರವನ್ನು ಸೇರುವ ಅಳಿವೆಯಿಂದ ಕಂಗೊಳಿಸುತ್ತಿರುವ ಹೊಳೆ ಪ್ರಶಾಂತವಾಗಿ ಪರಿಶುದ್ಧವಾದ ಗಾಳಿಯನ್ನು ನೀಡುತ್ತಿದೆ.ಇತ್ತೀಚಿನ ದಿನಗಳಲ್ಲಿ ಈ ಹೊಳೆಯ ದಂಡೆ ಕಸ – ಕಡ್ಡಿ ,ಔಷಧಿ ಬಾಟಲಿಗಳು ,ಹೆಂಡದ ಬಾಟಲಿಗಳು ,ಗೃಹ ತ್ಯಾಜ್ಯ ಹಾಗೂ ಇನ್ನಿತರ ಮಾಲಿನ್ಯಕಾರಕ ವಸ್ತುಗಳಿಂದ ಪರಿಸರವನ್ನು ಹಾಳುಮಾಡುತ್ತಿದೆ .
ಇಂತಹ ಪರಿಸ್ಥಿತಿಯನ್ನು ಗಮನಿಸಿದ ಅಳ್ವೇದಂಡೆಯ ಮಿತ್ರ ಬಳಗ ದಿನಾಂಕ 03.05.2020 ರಂದು ಮುಂಜಾನೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಜನರ ಪ್ರಶಂಸೆಗೆ ಪಾತ್ರವಾಯಿತು.ಇದರ ಜೊತೆಗೆ ರಸ್ತೆಯ ಪಕ್ಕದಲ್ಲಿ ರಾತ್ರಿಯ ವೇಳೆ ಸಂಚರಿಸುವ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಹಿಂಡು ಹಿಂಡಾಗಿ ಬೆಳೆದ ಅನಾವಶ್ಯಕ ಗಿಡಗಳನ್ನು ಸಹ ಮಿತ್ರ ಬಳಗದ ಎಲ್ಲಾ ಸದಸ್ಯರುಗಳು ಜೆ.ಸಿ.ಬಿ. ಮೂಲಕ ತಮ್ಮ ಸ್ವಂತ ಹಣದಿಂದ ತೆರವುಗೊಳಿಸಿ ಜನರ ತಿರುಗಾಟಕ್ಕೆ ಅನುವುಮಾಡಿಕೊಟ್ಟರು.
ಮಾಜಿ ಯೋಧ ಶಂಕರ ನಾಯ್ಕ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಕೇಶವ ನಾಯ್ಕ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ ಮಿತ್ರ ಬಳಗದ ಎಲ್ಲಾ ಸದಸ್ಯರು ಹಾಜರಿದ್ದು ಸಹಕರಿಸಿದರು.