ಕಾರವಾರ : ಕರಾವಳಿಗರ ತಾಯಿ – ಮಗನ ಹಬ್ಬವೆಂದೇ ಕರೆಯುವ ಗೌರಿ- ಗಣೇಶ ಹಬ್ಬದ ಆಚರಣೆಗೆ ಜಿಲ್ಲೆಯಾದ್ಯಂತ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಗಣಪತಿ ಪ್ರತಿಷ್ಠಾಪನೆಗೆ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳೆಲ್ಲೆಡೆ ಪೆಂಡಾಲ್ ನಿರ್ಮಿಸಿ, ಅಲಂಕಾರ ಕಾರ್ಯಗಳನೆಲ್ಲಾ ಪೂರ್ತಿ ಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿವಿಧೆತ್ತರದ ಗಜಮುಖನ ಖರೀದಿಯೂ ಭರದಿಂದ ಸಾಗಿದೆ. ದೂರದೂರುಗಳಿಗೆ ಗಣಪತಿಯನ್ನು ಕೊಂಡೊಯ್ಯುವವರು ಗುರುವಾರದಿಂದಲೇ ಗ್ರಾಮಗಳಿಗೆ ಗಜವದನನನ್ನು ಕರೆದೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಮೂಷಿಕ ವಾಹನನ ಸಾಗಾಟಕ್ಕೆ ವರುಣ ಅಡ್ಡಿಯಾಗುತ್ತಿರುವುದರಿಂದ ಬೆನಕ ಮಹಾಶಯನನ್ನು ಪ್ಲಾಸ್ಟಿಕ್ ಹೊದಿಕೆ ಯಲ್ಲಿ ಕೊಂಡೊಯ್ಯುವ ಪರಿಸ್ಥಿತಿ ಭಕ್ತರಿಗೊದಗಿದೆ.
ಹಬ್ಬದ ಸಲುವಾಗಿ ಗುರುವಾರದಿಂದಲೇ ಪೂಜಾ ಸಾಮಾಗ್ರಿ, ಹಣ್ಣು ಹೂವುಗಳ ವ್ಯಾಪಾರ ಚುರುಕು ಗೊಂಡಿದ್ದು, ಗುರುವಾರ ಎಂಜಿ ರಸ್ತೆಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ವ್ಯಾಪಾರ ಮಳಿಗೆಗಳಲ್ಲಿ ಹಣ್ಣು, ಹೂವಿನ ವ್ಯಾಪಾರ ಜೋರಾಗಿತ್ತು.
ವಿವಿಧೆಡೆ ನೆಲೆಸಿರುವ ತಾಲ್ಲೂಕಿನ ಜನತೆ ಗುರುವಾರದಿಂದಲೇ ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿದ್ದು, ಬಸ್ ನಿಲ್ದಾಣ ಜನಜಂಗುಳಿಯಿಂದ ಕೂಡಿತ್ತು. ಅಲ್ಲದೇ ನಗರಕ್ಕೆ ಬರುವ ಬಸ್‌ಗಳು ಕಿಕ್ಕಿರಿದು ತುಂಬಿದ್ದವು.
ಸಮುದ್ರದಲ್ಲಿ ವಿಸರ್ಜನೆ ಇಲ್ಲ: ಬಣ್ಣ ಬಳಿದ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡುವುದನ್ನು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಸಿರುವ ಸಭೆಗಳಲ್ಲಿ ಗಣಪತಿ ಸೇವಾ ಸಮಿತಿಗಳಿಗೆ ಮಾಹಿತಿ ನೀಡಲಾಗಿದ್ದು, ಜಿಲ್ಲಾಡಳಿತ ದೊಂದಿಗೆ ಕೈ ಜೋಡಿಸುವಂತೆ ಸ್ಥಳೀಯ ಸಂಸ್ಥೆಗಳು, ಪೊಲೀಸರು ಕರೆ ನೀಡಿದ್ದಾರೆ.