ಕುಮಟಾ : ಧರ್ಮದ ಸೋಂಕಿಲ್ಲದ ಕನ್ನಡವನ್ನೇ ಉಸಿರಾಗಿಸಿಕೊಂಡು ನಿತ್ಯೋತ್ಸವದ ಮೂಲಕ ದಿನದ ಹೊಸಬದುಕನ್ನು ಲವಲವಿಕೆಯ ಉತ್ಸಾಹದಿಂದ ನಾಡಿಗೆ ಉಣಬಡಿಸಿದ ಕವಿ ನಿಸ್ಸಾರ ಅಹಮದ್ ಎಂದು ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನ ಗಣಪತಿ ಅಭಿಪ್ರಾಯ ಪಟ್ಟರು. ಅವರು ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಿಸ್ಸಾರ ಅಹಮದ್ ರವರಿಗೆ ನುಡಿನಮನ ಸಲ್ಲಿಸುತ್ತಾ ಕೋವಿಡ್-19 ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸರ್ಕಾರದ ಸುತ್ತೋಲೆಯಿಂದ ಸಾರ್ವಜನಿಕವಾಗಿ ಈ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ ಕಾರ್ಯದರ್ಶಿ ಮಂಜುನಾಥ ನಾಯ್ಕರೊಂದಿಗೆ ನುಡಿನಮನ ಸಲ್ಲಿಸುತ್ತಾ 1936ರಲ್ಲಿ ಜನಿಸಿದ ಕೊಕ್ಕರೆಹೊಸಳ್ಳಿ ಶೇಖಹೈದರ ನಿಸ್ಸಾರಹಮದ್ 10 ನೇ ವರ್ಷಕ್ಕೆ ‘ಜಲಪಾತ’ವನ ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದರು. ಮುಂದೆ ಜೋಗ ಜಲಪಾತದ ಕುರಿತಾಗಿ ಬರೆದ ನಿತ್ಯೋತ್ಸವದ ಜೋಗದಸಿರಿ ನಾಡಿನಲ್ಲೆಲ್ಲಾ ನಿಸ್ಸಾರಹಮದ್ ಅವರ ಹೆಸರು ಮನೆಮಾತಾಗುವಂತೆ ಮಾಡಿತು. ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು 1994ರ ವರೆಗೆ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಾ ಸಾಹಿತ್ಯಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡು 21 ಕವನಸಂಕಲನ, 14ವೈಚಾರಿಕ ಕೃತಿ, 5 ಮಕ್ಕಳ ಸಾಹಿತ್ಯ, 5 ಅನುವಾದ ಸಾಹಿತ್ಯ 13 ಸಂಪಾದನಾ ಕೃತಿಯನ್ನು ಕನ್ನಡ ಸಾಹಿತ್ಯದ ಕಣಜಕ್ಕೆ ತುಂಬಿದ ನಿಸ್ಸಾರ ಅಹಮದ್ ಮಾಸ್ತಿ, ಗೊರೂರು,ಅನಕೃ, ಕೆಂಪೇಗೌಡ,ಪಂಪ, ನಾಡೋಜ, ರಾಜ್ಯೋತ್ಸವ ಹೀಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. 1978ರಲ್ಲಿ ಕನ್ನಡ ಹಾಡುಗಳನ್ನು ಧ್ವನಿಸುರುಳಿಗೆ ಅಳವಡಿಸುವುದರ ಮೂಲಕ ಹೊಸಸಂಪ್ರದಾಯಕ್ಕೆ ನಾಂದಿ ಹಾಡಿ ಕವಿತೆಗಳಿಗೆ ಹೊಸಭಾಷ್ಯಬರೆದರು ಎಂದು ಅಭಿಪ್ರಾಯ ಪಟ್ಟರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಮಂಜುನಾಥ ನಾಯ್ಕ ಮಾತನಾಡಿ ನಿಸ್ಸಾರ ಅಹಮದ್ ರವರ ಮನಸು ಗಾಂಧಿ ಬಜಾರ್, ನಿತ್ಯೋತ್ಸವ ಕಾವ್ಯಗಳೊಟ್ಟಿಗೆ ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನಾತ್ಮಕ ಕವನವಾಗಿದ್ದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ಅವರ ಕವನಗಳು ಇಂದು ಪದವಿತರಗತಿಗಳಿಗೆ ಪಠ್ಯವಾಗಿದೆ. ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಅವರ ಸಾಹಿತ್ಯ ಶ್ರೇಷ್ಠತೆಯನ್ನು ತೋರಿಸುತ್ತದೆ. ಧೀಮಂತ ಕವಿ ಇಂದು ನಾಡಿನಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಅವರ ಸಾಹಿತ್ಯ ನಿತ್ಯವೂ ಎಲ್ಲಾ ಕನ್ನಡಿಗರ ಮನದಲ್ಲಿ ನಿಲ್ಲುತ್ತವೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನ ಮುಂದೂಡಿಕೆ : ಎಪ್ರಿಲ್ 2020 ರ ಮಾಹೆಯಲ್ಲಿ ನಡೆಸಲು ಯೋಜಿಸಿದ್ದ ಕುಮಟಾ ತಾಲ್ಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೋವಿಡ-19 ನಿಂದಾಗಿ ಅನಿರ್ದಿಷ್ಟ ಅವಧಿಗೆ ಮುಂದೂಡಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಶ್ರೀಧರ ಗೌಡ.ಉಪ್ಪಿನಗಣಪತಿ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.