ಕಾರವಾರ: ನಾಡಿನ ತುಂಬ ಜೋಗದ ಸಿರಿಯನ್ನು ಚಿಲ್ಲಿದ ಹಿರಿಯ ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿಧನ ಕನ್ನಡ ಸಾಹಿತ್ಯ ವಲಯಕ್ಕೆ ಬಹು ದೊಡ್ಡ ಕಂದಕ ಬಿದ್ದಂತಾಯಿತು. ಪ್ರಕೃತಿ ರಮ್ಯತೆಯನ್ನು ಅನುಭವಿಸುತ್ತಲೇ ಮನುಷ್ಯ ಸಂಬಂಧ ಗಟ್ಟಿಸಿಕೊಳಿಸುವಲ್ಲಿ ಅವರ ಕಾವ್ಯ ಅಪಾರವಾಗಿ ದುಡಿದಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.
ನಿಸಾರ್ ಅಹಮ್ಮದ್ ಬೆಂಗಳೂರಿನ ಲಾ¯ಭಾಗ್ ಮತ್ತು ಗಾಂಧೀ ಬಝಾರ್ ಇವೆರಡು ತಮಗೆ ಶ್ವಾಸಕೋಶಗಳಿದ್ದಂತೆ. ಲಾಲಭಾಗ್ ಏಕಾಂತಕ್ಕೆ, ಗಾಂಧೀ ಬಝಾರು ಲೋಕಾಂತಕ್ಕೆ ಎಂದು ನಿಸ್ಸಾರ್ ಪದೇ ಪದೇ ತಮ್ಮ ಒಳದನಿಯನ್ನು ಬಿಚ್ಚಿಡುತ್ತಿದ್ದರು. ಇವೆರಡನ್ನೂ ಅವರ ಕಾವ್ಯ ಪಯಣದಲ್ಲಿ ರೂಪಕವಾಗಿ ಪದೇ ಪದೇ ದುಡಿಸಿಕೊಂಡರು ಎಂದು ಕರ್ಕಿಕೋಡಿ ಅವರು ತಿಳಿಸಿದರು.
2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಪಡೆದಿದ್ದ ನಿಸಾರ್ ಅಹಮ್ಮದ ತಮ್ಮ ಭಾಷಣದಲ್ಲಿ ಕನ್ನಡ ನಾಡಿನ ವೈಭವನ್ನು ಮನದುಂಬಿ ಕೊಡಾಡಿದ್ದರು.
ಮೂರು ವರ್ಷಗಳ ಹಿಂದೆ ಮುರ್ಡೆಶ್ವರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯಾಸಕ್ತರೆಲ್ಲ ಅವರೊಂದಿಗೆ ಕಾವ್ಯೋತ್ಸವದ ನೆಲದಲ್ಲಿ ಕೆಲ ಸಮಯ ಕಳೆದಿದ್ದನ್ನು ಅರವಿಂದ ಕರ್ಕಿಕೋಡಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.