ಕಾರವಾರ : ನಗರದಲ್ಲಿ ಗುರುವಾರ ಸಡಗರ ಮತ್ತು ಭಕ್ತಿಯಿಂದ ಗೌರಿ ಹಬ್ಬವನ್ನು ಆಚರಿಸಲಾಯಿತು. ಹಲವರು ಬುಧವಾರ ಸಂಜೆಯೇ ಗೌರಿ ಮೂರ್ತಿಯನ್ನು ಮನೆಗೆ ತಂದರೆ, ಮತ್ತೆ ಕೆಲವರು ಗುರುವಾರ ಬೆಳಗ್ಗೆ ಮೂರ್ತಿ ತಂದು ಪ್ರತಿಷ್ಠಾಪಿಸಿದರು.

ಹಬ್ಬದ ಸಲುವಾಗಿ ಗುರುವಾರ ಬೆಳಗಿನ ಜಾವವೇ ಎದ್ದ ಮಹಿಳೆಯರು ಸ್ನಾನಾದಿಗಳನ್ನು ಪೂರೈಸಿ, ಬಾಗಿಲ ಮುಂದೆ ಬಣ್ಣದ ರಂಗವಲ್ಲಿ ಇಟ್ಟರು. ಬಾಗಿಲಿಗೆ ತಳಿರು -ತೋರಣ ಕಟ್ಟಿ ಅಲಂಕರಿಸಿದರು. ನಂತರ ಬೆಳಗ್ಗೆಯೇ ಪೂಜೆ ಮಾಡುವವರು ತಟ್ಟೆ ಅಥವಾ ಬಾಳೆ ಎಲೆಯ ಮೇಲೆ ಅಕ್ಕಿ ಹರಡಿ ಒಳ್ಳೆಯ ಗಳಿಗೆಯನ್ನು ನೋಡಿ ಗೌರಿಯನ್ನು ಪ್ರತಿಷ್ಠಾಪಿಸುತ್ತಿದ್ದರು. ನಂತರ ಬಾಳೆಕಂಬ, ಹೂವು, ಹಣ್ಣುಗಳ ಜೋಡಣೆಯೊಂದಿಗೆ ದೇವಿಯನ್ನು ಅಲಂಕರಿಸಿ ಪೂಜಿಸುತ್ತಿದ್ದರು. ಸಂಜೆ ವೇಳೆಗೆ ಮೂರ್ತಿಗಳ ಸುತ್ತ ಸಣ್ಣದಾದ ಬಣ್ಣ ಬಣ್ಣದ ಲೈಟ್‌ಗಳನ್ನು ಬಿಟ್ಟು ವಿಶೇಷವಾಗಿ ಅಲಂಕರಿಸಿದ್ದರು. ಇನ್ನೂ ಕೆಲವು ಸಂಪ್ರದಾಯದವರು ಮೊರದಲ್ಲಿ ಗೌರಿಗೆ ನೀಡುವ ಬಾಗಿನ ಹಾಗೂ ಪೂಜಾ ಸಾಮಗ್ರಿಗಳನ್ನಿಟ್ಟು ಅದರ ಮೇಲೊಂದು ಮೊರ ಮುಚ್ಚಿಕೊಂಡು ದೇವಸ್ಥಾನಗಳಿಗೆ ಹೋಗಿ ಪೂಜಿಸುತ್ತಿದ್ದರು.

RELATED ARTICLES  ಮಂಗನಿಗೆ ಹೊಡೆದ ಗುಂಡು ವ್ಯಕ್ತಿಗೆ ತಾಗಿತು.

ಹೂವು-ಹಣ್ಣು ದುಬಾರಿ: ಹಬ್ಬದ ಅಂಗವಾಗಿ ಹೂವು-ಹಣ್ಣಿಗೆ ಹೆಚ್ಚಿನ ಬೇಡಿಕೆಯಿತ್ತು. ಹೀಗಾಗಿ ಬೆಲೆಗಳೂ ದುಬಾರಿಯಾಗಿದ್ದವು.

ಗೌರಿ ಹಬ್ಬದ ಜತೆಗೆ ಜತೆಗೇ ಶುಕ್ರವಾರ ನಡೆಯುವ ಗಣೇಶನ ಹಬ್ಬದ ಸಿದ್ಧತೆಗಳೂ ಜೋರಾಗಿ ನಡೆದಿದ್ದವು. ಹಲವರ ಮನೆಗಳಲ್ಲಿ ಗಣಪನಿಗೆ ಪ್ರಿಯವಾದ ಮೋದಕ, ಸಿಹಿ ತಿಂಡಿ ಕರಿಯುತ್ತಿದ್ದ ಘಮ ಹರಡುತ್ತಿತ್ತು.

RELATED ARTICLES  ಮಾರುಕಟ್ಟೆಯಿಲ್ಲದೇ ಕಂಗೆಟ್ಟಿದ್ದ ಅನಾನಸ್ ಬೆಳೆಗಾರರು ಈಗ ಸ್ವಲ್ಪ ನಿರಾಳ..!

ಹೆಣ್ಣು ಮಕ್ಕಳಿಗೆ ಬಾಗಿನದ ಸಂಭ್ರಮ: ಮದುವೆಯಾಗಿ ಗಂಡನ ಮನೆ ಸೇರಿದ ಹೆಣ್ಣು ಮಕ್ಕಳು ಗೌರಿಹಬ್ಬಕ್ಕೆ ತವರು ಮನೆಗೆ ಬರುವುದು ವಾಡಿಕೆ. ಹಾಗೆ ಬಂದವರಿಗೆ ಸೀರೆ-ಕುಪ್ಪಸದ ಬಾಗಿನ ಕೊಡುವುದು ಸಂಪ್ರದಾಯ. ಅದೇ ರೀತಿ ಗುರುವಾರವೂ ನಡೆಯಿತು. ಹೀಗಾಗಿ ಹಲವರ ಮನೆಗಳಲ್ಲಿ ಹೆಣ್ಣು ಮಕ್ಕಳ ಸಂಭ್ರಮ ಕಳೆಗಟ್ಟಿತು.

ದೇವಾಲಯಗಳಲ್ಲೂ ವಿಶೇಷ ಪೂಜೆ: ಹಬ್ಬದ ಅಂಗವಾಗಿ ನಗರದ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಸ್ವಾಮಿಗೆ/ದೇವತೆಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಿದ್ದರು.