ಭಟ್ಕಳ: ಕೊರೋನಾ ಸೋಂಕಿನ ಶಂಕೆಯ ಮೇಲೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದವರ ಪೈಕಿ ಏಳು ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ಇದೀಗ ದೃಢಪಟ್ಟ ಬಗ್ಗೆ ವರದಿಗಳು ಬಂದಿವೆ.
ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಮೂವರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ನಾಲ್ವರು ಸೇರಿದಂತೆ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 50 ವರ್ಷದ ವೃದ್ಧೆ, 15, 16 ವರ್ಷದ ಯುವಕರು, 42 ವರ್ಷದ ಪುರುಷ, 21 ವರ್ಷದ ಯುವತಿ, 31 ವರ್ಷದ ಮಹಿಳೆ ಹಾಗೂ 60 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ.
ಈಗಾಗಲೇ 21 ಜನ ಸಕ್ರಿಯೆ ಸೋಂಕಿತರಿದ್ದು, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಕೋವಿಡ್- 19 ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 28ಕ್ಕೆ ಏರಿದ್ದು, ಒಟ್ಟು ಸೋಂಕಿತರ ಸಂಖ್ಯೆ 39 ಆಗಿದೆ.
ಭಟ್ಕಳದಲ್ಲಿ ಒಂದೇ ದಿನ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಸುಮಾರು 60 ಜನರ ಗಂಟಲು ದ್ರವದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಓಣಿಯಲ್ಲಿದ್ದವರು ಎನ್ನಲಾಗಿದ್ದು, ಇದು ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ.
ಅದರಂತೆ, ನಿನ್ನೆ ದೃಢಪಟ್ಟಿದ್ದವರಲ್ಲಿನ ವ್ಯಕ್ತಿಯೊಬ್ಬರ ಕುಟುಂಬದ ಆರು ಮಂದಿಗೆ ಹಾಗೂ ಅವರ ಸ್ನೇಹಿತರೊಬ್ಬರನ್ನು ಸೇರಿ ಒಟ್ಟು ಏಳು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಇದೀಗ ಭಟ್ಕಳ ಮಾತ್ರವಲ್ಲ, ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜನತೆಯ ಎದೆಯಲ್ಲಿ ಡವಡವ ಶುರುವಾಗಿದೆ.