ಕುಮಟಾ : ಭಟ್ಕಳದಲ್ಲಿ ತನ್ನ ನಾಗಾಲೋಟ ನಡೆಸಿ ಜನತೆಯನ್ನು ನಡುಗಿಸಿದ್ದ ಕರೋನಾ ಇದೀಗ ಕುಮಟಾದಲ್ಲಿಯೂ ತನ್ನ ಮೊದಲ ಖಾತೆ ತೆರೆದಿದೆ. ಇದು ಕುಮಟಾ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಭಯದಲ್ಲಿಯೇ ಬದುಕುತ್ತಿದ್ದ ಜನತೆಗೆ ಈ ಸುದ್ದಿ ಭರ ಸಿಡಿಲಿನಂತೆ ಬಂದೆರಗಿದೆ.ತಾಲೂಕಿನ ವ್ಯಕ್ತಿ ಕಳೆದ ಮೇ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದಿದ್ದು, ಅವರನ್ನು ಕ್ವಾರಂಟೈನ್ ಸೆಂಟರಿಗೆ ಕಳಿಸಲಾಗಿತ್ತು. ಇದೀಗ ಅವರ ಕೊರೊನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.
ಮೇ 5ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ವಾಪಸ್ಸಾಗಿದ್ದ ವ್ಯಕ್ತಿಯು, ಎಲ್ಲೂ ತಿರುಗಾಡದೆ ತಪಾಸಣೆಗೆ ಒಳಗಾಗಿ ನೇರವಾಗಿ ಬಂದು ಕುಮಟಾದಲ್ಲಿದ್ದ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ. ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಕೋವಿಡ್- 19 ಇರುವುದು ದೃಢಪಟ್ಟಿದೆ.
ಈತ ಕ್ವಾರಂಟೈನ್‌ನಲ್ಲಿದ್ದವರೊಂದಿಗೂ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಇದೀಗ ಅವನೊಂದಿಗೆ ಕ್ವಾರಂಟೈನ್ ಆದವರಲ್ಲೂ ಆತಂಕ ಹೆಚ್ಚಾಗಿದೆ. ಈತನೊಂದಿಗೆ ಕ್ವಾರಂಟೈನ್ ನಲ್ಲಿದ್ದ ಇನ್ನು ಕೆಲವರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಕುಮಟದಲ್ಲಿ ಇದು ಮೊದಲ ಪ್ರಕರಣವಾಗಲಿದೆ. ಕುಮಟದ ವ್ಯಕ್ತಿಗೆ ಕಾರವಾರದ ಐಸೋಲೇಶನ್ ಸೆಂಟರಿಗೆ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಾರೂ ಆಘಾತ ಪಡುವುದು ಬೇಡ.ಅವರನ್ನು ಕ್ವಾರಂಟೈನ್ ಮಾಡಿದ್ದೆವು ಹಾಗಾಗಿ ಅನಗತ್ಯ ಗೊಂದಲ ಗಾಳಿ ಸುದ್ದಿಗೆಅವಕಾಶ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.