ಕುಮಟಾ: ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕಿನ ಒಟ್ಟೂ 100 ಟೆಂಪೋ ಚಾಲಕ, ಮಾಲಕರು ಹಾಗೂ ನಿರ್ವಾಹಕರಿಗೆ ದಿ.ಮೋಹನ ಶೆಟ್ಟಿ ಟ್ರಸ್ಟ್ ವತಿಯಿಂದ ಟ್ರಸ್ಟ್‌ನ ಅಧ್ಯಕ್ಷೆ, ಮಾಜಿ ಶಾಸಕಿ ಶಾರದಾ ಶೆಟ್ಟಿಯವರ ಮೂಲಕ ಬುಧವಾರ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಲಾಕ್‌ಡೌನ್‌ನಿಂದ ಟೆಂಪೋ ಚಾಲಕ ಮಾಲಕರು ತೀವೃ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ. ಅವರಿಗೆ ಈ ಸಮಯದಲ್ಲಿ ಸಹಾಯ ಮಾಡುವುದು ನಮ್ಮ ಕರ್ತವ್ಯ. ಈಗಾಗಲೇ ದಿ.ಮೋಹನ ಶೆಟ್ಟಿ ಟ್ರಸ್ಟ್ ವತಿಯಿಂದ ಬಡವರಿಗೆ, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದ್ದು, 2 ನೆಯ ಹಂತದಲ್ಲಿ ಟೆಂಪೋ ಚಾಲಕರಿಗೆ, ಮಾಲಕರಿಗೆ ಹಾಗೂ ನಿರ್ವಾಹಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.

RELATED ARTICLES  ಶಿರಸಿ ಟಿ.ಎಸ್.ಎಸ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ನೂತನ ಮಾರಾಟ ಮಳಿಗೆ ಪ್ರಾರಂಭ

ಮೋಹನ ಶೆಟ್ಟಿಯವರು ಜನಸೇವೆಯೇ ಮುಖ್ಯವಾಗಿಸಿಕೊಂಡು, ಹಗಲಿರುಳು ಜನ ಸೇವೆ ಮಾಡಿದ್ದರು. ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ನಾವು ಬಡವರ ಸೇವೆ ಮಾಡುತ್ತಿದ್ದೇವೆ ಎಂದ ಅವರು, ಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ಸರ್ಕಾರ ನೆರವು ಘೋಷಿಸಿದೆ. ಅದರಂತೆ ಟೆಂಪೋ ಚಾಲಕರಿಗೂ ನೆರವು ಘೋಷಿಸಲು ಒತ್ತಾಯಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕಮಾರ ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಪತ್ರ ನೀಡುತ್ತೇನೆ ಎಂದರು.

RELATED ARTICLES  ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಕೊರೋನಾ ಲಸಿಕಾ ವಿವರ

ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಮಾತನಾಡಿ, ಕೊರೊನಾ ವೈರಸ್‌ನಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಟೆಂಪೋವನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಜೀವನ ಬಹಳ ಕಷ್ಟದಲ್ಲಿದೆ. ಅವರಿಗೆ ನಮ್ಮ ಟ್ರಸ್ಟ್ ವತಿಯಿಂದ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಮಧುಸೂದನ ಶೇಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್ ನಾಯ್ಕ, ದೀಪಾ ನಾಯ್ಕ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಮಾಜಿ ಸದಸ್ಯೆ ಅನಿತಾ ಮಾಪಾರಿ, ಪ್ರಮುಖರಾದ ಮನೋಜ ನಾಯಕ, ಸಚಿನ ನಾಯ್ಕ, ನಿತ್ಯಾನಂದ ನಾಯ್ಕ, ಗಜು ನಾಯ್ಕ, ವಿನು ಜಾರ್ಜ್ ಸೇರಿದಂತೆ ಮತ್ತಿತರರು ಇದ್ದರು.