ಕುಮಟಾ: ಹೊಸ ತಲೆಮಾರಿನ ಭರವಸೆಯ ವಿಮರ್ಶಕಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರ ನಿಧನ ಕನ್ನಡ ಜಗತ್ತಿಗೆ ಬಹುದೊಡ್ಡ ಹಾನಿ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ನಿಧನರಾದ ಡಾ. ಸೀತಾಲಕ್ಷ್ಮೀ ಕಳೆದ ಒಂದು ವರ್ಷದಿಂದ ಮೆದುಳು ಕ್ಯಾನ್ಸ್‍ರ್‍ನಿಂದ ಬಳಲುತ್ತಿದ್ದರೂ ತಮ್ಮ ಜೀವನೋತ್ಸಾಹವನ್ನು ಕಡಿಮೆ ಮಾಡಿಕೊಳ್ಳದೇ ಸಾಹಿತ್ಯ-ಪತ್ರಿಕಾರಂಗದ ಓದು, ಬರೆವಣಿಗೆಯಲ್ಲಿ ತೊಡಗಿಕೊಂಡಿದ್ದರು ಮಾತ್ರವಲ್ಲ, ತಮ್ಮ ಚಿಂತನೆಯ ಹರಿವಿಗೆ ಎಂದೂ ಒಡ್ಡು ಕಟ್ಟಿಕೊಂಡವರಲ್ಲ ಎಂದು ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.


ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕ ಮತ್ತು ಸ್ಮøತಿ ಪ್ರಕಾಶನದ ಸಂಚಾಲಕಿ ಶ್ಯಾಮಲಾ ಕರ್ಕಿಕೋಡಿ ಅವರ ಓರ್ವಳೇ ಮಗಳಾಗಿದ್ದ ಸೀತಾಲಕ್ಷ್ಮೀ ಬಾಲ್ಯದಿಂದಲೇ ಸಾಹಿತ್ಯದ ಪರಿಸರದಲ್ಲಿ ಬೆಳೆಯುತ್ತ ಪ್ರಗತಿಪರ ನಿಲುವಿನಲ್ಲಿ ತನ್ನತನ ಕಾಣಲು ತುಡಿಯುತ್ತಿದ್ದರು.
ಪತ್ರಿಕಾರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಸೀತಾಲಕ್ಷ್ಮಿ ಕರ್ಕಿಕೋಡಿ ಅವರ ಯಾವುದೇ ವಿಶೇಷ ವರದಿಗಳಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆಯನ್ನು ಢಾಳಾಗಿ ಕಾಣಬಹುದಾಗಿತ್ತು. ಎರಡು ಪಿ.ಹೆಚ್.ಡಿ. ಪ್ರಬಂಧಕ್ಕೆ ಕ್ರಮವಾಗಿ ಹಂಪಿ ಮತ್ತು ಮುಂಬೈ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದ್ದು, ಒಂದು ಪ್ರಬಂಧಕ್ಕೆ ಎಂ.ಫಿಲ್ ಪದವಿಯ ಗೌರವವನ್ನೂ ಪಡೆದಿದ್ದರು. ಪತ್ರಿಕೆಗಳಲ್ಲಿ ‘ವಿದುಶ್ಮತಿ’ ಹೆಸರಿನಲ್ಲಿ ಪುಸ್ತಕ ವಿಮರ್ಶೆ ಬರೆಯುತ್ತಿದ್ದ ಸೀತಾಲಕ್ಷ್ಮಿ ಸಾಹಿತ್ಯ ವಲಯದಲ್ಲಿ ವಿಶೇಷವಾಗಿ ಗಮನಸೆಳೆದಿದ್ದರು.

RELATED ARTICLES  ಪ ಪೂ ಶ್ರೀ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ


‘ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ, ರಂಗಕರ್ಮಿ ಸದಾನಂದ ಸುವರ್ಣ ಸಂಪದ, ರಂಗ ಚೇತನ ಸದಾನಂದ ಸುವರ್ಣ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ವಿ.ಅರ್ತಿಕಜೆ ಇವೆಲ್ಲ ಸೀತಾಲಕ್ಷ್ಮೀ ಅವರ ಕೃತಿಗಳಾದರೂ ಪ್ರಕಟೆಣೆಗೆ ಸಿದ್ಧವಾದ ಹಸ್ತಪ್ರತಿಗಳ ಹತ್ತಾರು ಕಟ್ಟುಗಳೇ ಇನ್ನೂ ಇವೆ ಎಂದು ತಿಳಿಸಿದ ಅರವಿಂದ ಕರ್ಕಿಕೋಡಿ, ಸೀತಾಲಕ್ಷ್ಮಿಗೆ ಕನ್ನಡ ಸಾಹಿತ್ಯದ ಹಸಿವು ಇನ್ನೂ ಇಂಗದಿರುವಾಗಲೇ ಹೊರಟು ಹೋದದ್ದು ನೋವಿನ ಸಂಗತಿ ಎಂದು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES  ರಾಜ್ಯ ಮಟ್ಟದ ಹವ್ಯಕ ಪಂದ್ಯಾವಳಿ ಸಂಪನ್ನ.


ಸಂತಾಪ ಸಭೆ: ಮೇ 17ರ ನಂತರ ಇತ್ತೀಚೆಗೆ ನಿಧನರಾದ ನಾಡಿನ ಹಿರಿಯ ಕವಿ ಕೆ.ಎಸ್.ನಿಸ್ಸಾರ್ ಅಹಮ್ಮದ್ ಮತ್ತು ವಿಮರ್ಶಕಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರ ಗೌರವಾರ್ಥ ಸಂತಾಪ ಸೂಚಕ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.