ಕಾರವಾರ: ಇಲ್ಲಿನ ಚೆಕ್ ಪೋಸ್ಟ್ ದಾಟಿ ಇತರ ಉದ್ಯೋಗಿಗಳ ಜೊತೆಗೆ ಗೋವಾ ರಾಜ್ಯಕ್ಕೆ ತೆರಳಿದ್ದ 23 ವರ್ಷ ವರ್ಷದ ಯುವಕನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಗೋವಾದ ಔಷಧಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಈತ, ಗೋವಾ- ಕರ್ನಾಟಕ ಗಡಿಯಾದ ಮಾಜಾಳಿ ಹಾಗೂ ಪೊಳೆಮ್ ಮೂಲಕ ಗೋವಾ ರಾಜ್ಯ ಪ್ರವೇಶಿಸಿದ್ದ ಎನ್ನಲಾಗಿದೆ. ಸೋಂಕು ದೃಢಪಟ್ಟ ಯುವಕನ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದ್ದಾರೆ. ಅಧಿಕೃತವಾಗಿ ಇನ್ನೂ ಗೋವಾದಿಂದ ಮಾಹಿತಿ ಬಂದಿಲ್ಲ. ಆದರೆ, ಆತ ಕಾರವಾರ ಚೆಕ್ ಪೋಸ್ಟ್ ನಿಂದ ಹೋಗಿದ್ದಾನೆ ಎನ್ನಲಾದ ಕಾರಣ ಆತನ ಮೂಲ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಗಾಗಿದ್ದ ಈತನಿಗೆ ವಾಸ್ಕೊ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿದೆ.