ಹೊನ್ನಾವರದ ತಾಲೂಕಿನ ಮುಗ್ವಾ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸಕಿಟ್ ವಿತರಣಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿಯವರು ಮಾತನಾಡಿ ಉಜ್ವಲ ಯೋಜನೆ ಇದೊಂದು ಕೇಂದ್ರ ಸರಕಾರದ ಜನಪರ ಯೋಜನೆಯಾಗಿದ್ದು ಈ ಯೋಜನೆಯನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಿಅನುಕೂಲತೆಯನ್ನು ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆಯವರು ಶ್ರಮಿಸುತ್ತಿದ್ದು ಅವರ ನೆರವಿನಿಂದ ಫಲಾನುಭವಿಗಳು ಸುಲಭವಾಗಿ ಮನೆ ಬಾಗಿಲಲ್ಲೆ ಈ ಯೋಜನೆಯ ಫಲ ಪಡೆದುಕೊಳ್ಳುವಂತಾಗಿದ್ದು ಇದಕ್ಕೆ ಸಹಕರಿಸಿದ ನಾಗರಾಜ ನಾಯಕ ತೊರ್ಕೆಯವರ ಕಾರ್ಯ ಅಭಿನಂದನೀಯ ಎಂದರು.
ಮುಖಂಡರಾದ ವೆಂಕಟ್ರಮಣ ಹೆಗಡೆಯವರು ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕರ್ತರೂ ಹೆಚ್ಚಿನ ಮುತುವರ್ಜಿ ಹಾಗೂ ಶ್ರಮ ವಹಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ದುಡಿಯಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರಸರಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಕಡುಬಡವರಿಗೆ ಈ ಯೋಜನೆಯಡಿ ಸಿಗುವ ಅನುಕೂಲತೆಯನ್ನು ಅವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರು ದುಡಿಯುತ್ತಿದ್ದು ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುವಂತಾಗಿದೆ ಎಂದು ಕಾರ್ಯಕರ್ತರ ಹಾಗೂ ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ನಾರಾಯಣ ಹೆಗಡೆಯವರ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲೂ ಕೇಂದ್ರಸರಕಾರದ ಹಲವು ಜನಪರ ಯೋಜನೆಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಫಲಾನುಭವಿಗಳು ಸುಲಭವಾಗಿ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಿ ಆ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವಂತೆ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ವಿನಯ ಪೂರ್ವಕವಾಗಿ ವಿನಂತಿಸುವುದರೊಂದಿಗೆ ಈ ಯೋಜನೆಯಡಿ ಫಲಾನುಭವಿಗಳಿಗೆ 6ಲಕ್ಷ ರೂ.ವಿಮೆ ಸೌಲಭ್ಯ ಇರುವುದಾಗಿ ಮಾಹಿತಿ ನೀಡಿದರು.
ಗೌರಿಗೌಡ, ಸುಬ್ಬಿಗೌಡ, ರಾಧಾನಾಯ್ಕ, ದುರ್ಗಿನಾಯ್ಕ, ಮಾದೇವಿಗೌಡ, ಸರಿತಾಗೌಡ, ಲಕ್ಷ್ಮೀಗೌಡ, ದೇವಿಮುಕ್ರಿ, ಮುಕ್ತನಾಯ್ಕ, ಮಂಕಾಳಿನಾಯ್ಕ ಮುಂತಾದ ಫಲಾನುಭವಿಗಳು ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡು ತಮ್ಮ ಸಂತಸ ವ್ಯಕ್ತ ಪಡೆಸಿದರು.
ಈ ಸಂಧರ್ಬದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ರಾಜೇಶ ಭಂಡಾರಿ, ವೆಂಕಟ್ರಮಣಹೆಗಡೆ, ಶಕ್ತಿಕೇಂದ್ರದ ಅಧ್ಯಕ್ಷರಾದ ನಾರಾಯಣಹೆಗಡೆ, ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ವಿನೋದ ನಾಯ್ಕ, ಮಂಜು ನಾಯ್ಕ, ನಾಗೇಶ ನಾಯ್ಕ, ಸುಭಾಷ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಮ್.ಎಸ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.