ಕುಮಟಾ: ರೋಟರಿ ಚಾರ್ಟರ್ ಡೇ ಪ್ರಯುಕ್ತ ಕುಮಟಾ ರೋಟರಿ ಕ್ಲಬ್ ವತಿಯಿಂದ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಮುಖಗವಸು ವಿತರಿಸಲಾಯಿತು. ರೋಟರಿ ಅಧ್ಯಕ್ಷ ಸುರೇಶ ಭಟ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಯೋಜಕತ್ವ ವಹಿಸಿದ್ದ ವಾತಜಾತ ಫಾರ್ಮಾ ಫುಡ್ಸ್ ಮ್ಯಾನೆಂಜಿಂಗ್ ಡೈರೆಕ್ಟರ್ ರೋಟೇರಿಯನ್ ವಸಂತ ರಾವ್ ಹಾಗೂ ಮಹಾಲಸಾ ಹ್ಯಾಂಡಿಕ್ರಾಫ್ಟ್ಸನ ಮ್ಯಾನೆಜಿಂಗ್ ಪಾರ್ಟನರ್ ರೊಟೇರಿಯನ್ ಚೇತನ್ ಶೇಟ್ ಅವರು ಶಾಲಾ ಮುಖ್ಯಾಧ್ಯಾಪಕ ರೊಟೇರಿಯನ್ ಎನ್.ಆರ್.ಗಜು ಅವರಿಗೆ ಮಾಸ್ಕ್‍ಗಳನ್ನು ಹಸ್ತಾಂತರಿಸಿದರು. ತಮಗೆ ಅವಶ್ಯವಿದ್ದ 450 ಮಾಸ್ಕ್‍ಗಳನ್ನು ಸ್ವೀಕರಿಸಿದ ಮುಖ್ಯಾಧ್ಯಾಪಕರು, ರೋಟರಿಯ ಕಾರ್ಯವನ್ನು ಶ್ಲಾಘಿಸಿದರಲ್ಲದೇ, ದಾನಿಗಳನ್ನು ಅಭಿನಂದಿಸಿ, ಶಾಲಾರಂಭದ ತರುವಾಯ ಪ್ರವೇಶಾತಿ ಪಡೆಯುವ 8, 9 ಮತ್ತು 10 ನೆಯ ತರಗತಿಯ ಹಾಗೂ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೊವಿಡ್-19 ವೈರಾಣು ಸೋಂಕಿತನ ಕುರಿತು ಮತ್ತೊಮ್ಮೆ ಜಾಗೃತಿ ಮೂಡಿಸಿ ಮಾಸ್ಕ್ ಮತ್ತು ಸೆನಿಟೈಸರ್ ಬಳಕೆಯ ಮಹತ್ವ ತಿಳಿಸಿ ವಿತರಿಸುವುದಾಗಿ ನುಡಿದರು.
ಇದೇ ಸಂದರ್ಭದಲ್ಲಿ ಮೂಕಾಂಬಿಕಾ ಇಕೋ ಪ್ರೋಡಕ್ಷನ್ ವತಿಯಿಂದ ದಿನೇಶ್ ಜಿ. ಆಚಾರಿ ಶಿಕ್ಷಕವರ್ಗದವರಿಗೆ ಸ್ವನಿರ್ಮಿತ ಮಾಸ್ಕ್ ನೀಡಿದರು. ಶಿಕ್ಷಕರಾದ ವಿ.ಎನ್.ಭಟ್ಟ, ಅನಿಲ್ ರೊಡ್ರಗಿಸ್, ಪ್ರದೀಪ ನಾಯ್ಕ, ಅಂಕಿತಾ ನಾಯ್ಕ, ಪ್ರಶಾಂತ ಗಾವಡಿ ಮೊದಲಾದವರು ಉಪಸ್ಥಿತರಿದ್ದರು.