ಕಾರವಾರ: ಲಾಕ್‌ಡೌನ್‌ನ್ನು ಮೇ.31 ರವರೆಗೆ ವಿಸ್ತರಿಸಿದ್ದು, ಹೊಸ ನಿಯಮದಂತೆ ಮತ್ತಷ್ಟು ಸಡಿಲಿಕೆ ಮಾಡಿ, ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯುವಂತೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.
ದೇಶದಾದ್ಯಂತ ಲಾಕ್‌ಡೌನ್ 3.0 ದ ಅನ್ವಯ ಎಲ್ಲ ಅಂಗಡಿಗಳನ್ನು ತೆರೆಯಲು ಬಿಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಲಾಕ್‌ಡೌನ್ 4.0 ದ ಹೊಸ ಮಾರ್ಗಸೂಚಿಯಂತೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ನೀಡುವ ದೃಷ್ಠಿಯಿಂದ ಮಧ್ಯಾಹ್ನದ ವೇಳೆಯಲ್ಲೂ ಅಂಗಡಿಗಳನ್ನು ತೆರೆದಿರಲು ಅವಕಾಶ ನೀಡಲಾಗಿದೆ.
ಲಾಕ್‌ಡೌನ್ ಸಡಿಲಿಕೆಯಿಂದ ನಗರ ಭಾಗದಲ್ಲಿ ಬೆಳಗ್ಗಿನ ಸಮಯದಲ್ಲಿ ಜನದಟ್ಟಣೆ ಹೆಚ್ಚುತ್ತಿತ್ತು, ತಮ್ಮ ಕೆಲಸಗಳನ್ನು ಬೆಳಗ್ಗಿನ ಅವಧಿಯಲ್ಲೇ ಮುಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಈ ಅವಧಿ ವಿಸ್ತರಣೆಯಿಂದ ಕೆಲಸ- ಕಾರ್ಯಗಳಿಗೆ ಮತ್ತಷ್ಟು ಸಮಯ ಸಿಗಲಿದೆ. ಅಂಗಡಿಕಾರರ ಜೀವನಕ್ಕೂ ಸಹಾಯವಾಗಲಿದೆ ಎಂದು ಅಂದಾಜಿಸಿದೆ. ಎಲ್ಲ ಕಡೆ ಮಾಸ್ಕ್ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳಬೇಕು.
ಅಂತಾರಾಜ್ಯದಿಂದ ಬರುವವರು ಸೇವಾ ಸಿಂಧುವಿನಲ್ಲಿ ಇ-ಪಾಸ್ ಗೆ ಅರ್ಜಿ ಸಲ್ಲಿಸಿ, ಅನುಮತಿ ಸಿಕ್ಕರೆ ಮಾತ್ರ ಬರಬಹುದು. ಚೆಕ್‌ಪೋಸ್ಟ್ ನಲ್ಲಿ ಇ-ಪಾಸ್ ನೀಡಿದಲ್ಲಿ ಮಾತ್ರ ಮುಂದೆ ಬರಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ, ತಾಲೂಕಿಗೆ ಸಂಚಾರ ನಡೆಸಲು ಯಾವುದೇ ರೀತಿಯ ಪಾಸ್‌ನ ಅವಶ್ಯಕತೆ ಇಲ್ಲ.
ಮದುವೆ ಸಮಾರಂಭದಲ್ಲಿ 50 ಜನರಿಗೆ ಅವಕಾಶ ನೀಡಲಾಗಿದ್ದು, ಒಬ್ಬ ನೋಡಲ್ ಅಧಿಕಾರಿ ಕಡ್ಡಾಯವಾಗಿ ಹಾಜರಿರಲೇಬೇಕು ಎಂದರು. ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಅವಕಾಶ ನೀಡಲಾಗಿದೆ. ಎಲ್ಲ ಕಡೆ ಮಾಸ್ಕ್ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ.
ವಿದೇಶದಿಂದ ಬಂದವರನ್ನು ಕೂಡ 12 ದಿನಗಳ ಕಾಲ ಕ್ವಾರಂಟೈನ್ ಸೆಂಟರಿನಲ್ಲಿ ಕ್ವಾರಂಟೈನ್ ಮಾಡಿ, ವರದಿಯಲ್ಲಿ ನಗೆಟಿವ್ ಬಂದ ನಂತರ ಮನೆಗೆ ಕಳಿಸುತ್ತೇವೆ. ನಂತರದಲ್ಲೂ ಅವರಿಗೆ 14 ದಿನ ಹೋಂ ಕ್ವಾರಂಟೈನ್ ಮಾಡಿರುತ್ತೇವೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರಲು ಈ ವರೆಗೆ 3926 ಜನರಿಗೆ ಅವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದ ಪ್ರಕರಣಗಳೆಲ್ಲ ಕ್ವಾರಂಟೈನ್ ಸೆಂಟರಿನಲ್ಲಿದ್ದಾವಗಲೇ ದೃಢ ಪಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಿದಲ್ಲಿ ಅವರ ವಿರುದ್ದವೂ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ. ಜಿಲ್ಲೆಯ ಜನರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಡಿ.ಸಿಯವರು ಮಾಹಿತಿ ನೀಡಿದ್ದಾರೆ.