ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ (ತಿದ್ದುಪಡಿ) ವಿದೇಯಕದ ವಿರುದ್ಧ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಕಾರವಾರದಲ್ಲಿಂದು ಪ್ರತಿಭಟನಾ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಅವರ ನೇತೃತ್ವದಲ್ಲಿ ಆಗಮಿಸಿದ ಕಿಸಾನ್ ಕಾಂಗ್ರೆಸ್ ನ ಪದಾಧಿಕಾರಿಗಳು ಕೇಂದ್ರ ಸರ್ಕಾರ ತರಾತುರಿಯಲ್ಲಿ ತರಲಿರುವ ವಿದ್ಯುತ್ ತಿದ್ದುಪಡಿ ಮಸೂದೆ ತಾರತಮ್ಯದಿಂದ ಕೂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೊಳಿಸಿ ಸ್ನೇಹಿತರಾದ ವಿದ್ಯುತ್ ಉದ್ಯಮಿ ಗೌತಮ್ ಅಂಬಾನಿ ಮತ್ತು ಇತರರಿಗೆ ಲಾಭ ಮಾಡಿಕೊಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸುವುದಲ್ಲದೆ ಇಂತಹ ಗಂಭೀರ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರ ಜೊತೆ ಚಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಸಲು ಗಡುವು ನೀಡಲಾಗಿದ್ದು ರಾಜ್ಯ ಸರ್ಕಾರ ಪ್ರಸ್ತಾವಿತ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸಬಾರದು. ರೈತರ ಹಿತಕ್ಕೆ ಧಕ್ಕೆ ಬಂದಲ್ಲಿ ರೈತರೊಡನೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೆರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಿಸಾನ್ ಕಾಂಗ್ರೆಸ್ ಪದಾಧಿಕಾರಿ ಜಿಲ್ಲಾ ಪಂಚಾಯತ್ ಸದಸ್ಯ ದೀಪಕ ನಾಯ್ಕ್ ಮಂಕಿ, ಗಜಾನನ ನಾಯ್ಕ್ ಸಾಲಕೋಡ್, ಆನಂದ್ ನಾಯ್ಕ್, ಮಂಜುನಾಥ ನಾಯ್ಕ್, ಅರುಣ್ ನಾಯ್ಕ್, ಬಾಲು ಭಂಡಾರಿ, ವಿನೋದ್ ನಾಯ್ಕ್ ಕರ್ಕಿ, ಸುರೇಶ್ ಮೇಸ್ತ ಮುಂತಾದವರು ಉಪಸ್ಥಿತರಿದ್ದರು.