ಭಟ್ಕಳ: ಕಳೆದ ಅನೇಕ ದಿನಗಳಿಂದ ಸೀಲ್ ಡೌನ್ ಆಗಿದ್ದ ಭಟ್ಕಳಿಗರಿಗೆ ನಾಳೆಯಿಂದ ಕೊಂಚ ರಿಲೀಫ್ ಸಿಗಲಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಿ, ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದು.ಇದು ಭಟ್ಕಳದ ಜನತೆಯ ಮುಖದಲ್ಲಿ ನಗು ತರಿಸಿದೆ.
ಲಾಕ್ ಡೌನ್ ಸಡಿಲಿಕೆಯ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ. ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಅಂಗಡಿಕಾರರ ಜವಾಬ್ದಾರಿ. ಇದಕ್ಕೆ ವಿಫಲವಾದಲ್ಲಿ ಅವರ ಅಂಗಡಿ ಪರವಾನಿಗೆ ರದ್ದಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಕಿರಾಣಿ, ಮೆಡಿಕಲ್, ದಿನಸಿ, ಬ್ಯಾಂಕ್, ಗ್ಯಾರೇಜ್, ಬೇಕರಿ, ಸಲೂನ್, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳಿಗೆ, ಆಟೋ ಮೊಬೈಲ್, ಬಟ್ಟೆ ಅಂಗಡಿಗಳನ್ನು ಷರತ್ತುಬದ್ಧವಾಗಿ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆಟೊಗಳನ್ನು ಓಡಿಸಲೂ ಅನುಮತಿ ನೀಡಲಾಗಿದೆ, ಜೂನ್ 8ರವರೆಗೆ ಈ ಸಡಿಲಿಕೆ ಜಾರಿಯಲ್ಲಿದ್ದು, ಜನರ ಓಡಾಟದ ಮೇಲೆ ನಿಗಾ ಇಡಲಾಗುತ್ತದೆ. ನಂತರ ಇನ್ನಷ್ಟು ಸಡಿಲಿಕೆಗೆ ಚಿಂತನೆ ಮಾಡಲಿದ್ದೇವೆ. ಈ ವೇಳೆ ಸಾರ್ವಜನಿಕರು, ಮಾಧ್ಯಮದವರು, ಮುಖಂಡರುಗಳ ಅಭಿಪ್ರಾಯ ಪಡೆದು ಮುಂಬರುವ ದಿನಗಳಲ್ಲಿ ಹೇಗೆ ನಿಯಂತ್ರಣ ಇಡಬೇಕಿದೆ ಎಂಬ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.