ಕಾರವಾರ: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ 2020- 21ನೇ ಸಾಲಿನ ಬಜೆಟ್ ಮಂಡಿಸಿದರು.
ಜಿಲ್ಲಾ ಪಂಚಾಯತಿ ಕಾರ್ಯಕ್ರಮಗಳ ವಿವಿಧ ಲೆಕ್ಕ ಶೀರ್ಷಿಕೆಯಡಿ 31544.01 ಲಕ್ಷ ರೂ., ತಾಲೂಕು ಪಂಚಾಯತಿ ಕಾರ್ಯಕ್ರಮದ ವಿವಿಧ ಲೆಕ್ಕ ಶೀರ್ಷಿಕೆಯಡಿ 72031.20 ಲಕ್ಷ ಹಾಗೂ ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ 66 ಲಕ್ಷ ಅನುದಾನವನ್ನು ಒದಗಿಸಿದೆ ಎಂದು ಪ್ರಕಟಿಸಿದರು.
ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಅಧೀನ ಇಲಾಖೆಗಳ ಅಧಿಕಾರಿ ಮತ್ತು ನೌಕರರ ವೇತನಾಂಶಕ್ಕೆ ಜಿಲ್ಲಾ ವಲಯ ಲೆಕ್ಕ ಶೀರ್ಷಿಕೆಗಳಡಿ 10117.93 ಲಕ್ಷ ರೂ., ಹೊರಮೂಲ ಸಿಬ್ಬಂದಿಗಳ ವೇತನಕ್ಕಾಗಿ 808.28 ಲಕ್ಷ, ದಿನಗೂಲಿ ನೌಕರರ ವೇತನಕ್ಕೆ 77.04 ಲಕ್ಷ ರೂ. ಮತ್ತು ಕಛೇರಿ ವೆಚ್ಚ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ 20540.76 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
2020-21 ನೇ ಸಾಲಿಗೆ ಸಂಬಂಧಿಸಿದಂತೆ ಶಿಕ್ಷಣ, ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಶೇಷ ಘಟಕ ಯೋಜನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ವಯಸ್ಕರ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸೇವೆ, ಗ್ರಾಮೀಣ ನೀರು ಪೂರೈಕೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೌಷ್ಟಿಕ ಆಹಾರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಹಕಾರ, ಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ, ಸಣ್ಣ ನೀರಾವರಿ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು, ರೇಷ್ಮೆ ಇಲಾಖೆ, ಸಚಿವಾಲಯ ಆರ್ಥಿಕ ಸೇವೆಗಳು, ಜಿಲ್ಲಾ ಯೋಜನಾ ಘಟಕ, ಕೈಮಗ್ಗ ಮತ್ತು ಜವಳಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾಗರಿಕರ ಕಲ್ಯಾಣ ಮತ್ತು ಇತರೆ ವಲಯಗಳಲ್ಲಿ 2020- 21ನೇ ಸಾಲಿಗೆ 2019- 20ನೇ ಸಾಲಿನಲ್ಲಿ ಒದಗಿಸಿದ ಅನುದಾನಕ್ಕಿಂತ 1769.53 ಲಕ್ಷ ಹೆಚ್ಚಿಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಬಜೆಟ್ ನ ಕಿರು ಪರಿಚಯ ಮಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ 2020- 21ನೇ ಸಾಲಿನ ಕರಡು ಯೋಜನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಿದ್ದು, ಈಗಾಗಲೇ ಸರ್ಕಾರ ಈ ಬಗ್ಗೆ ಅಂತಿಮ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.