ಲೇಖನ- ಉಮೇಶ ಮುಂಡಳ್ಳಿ ಭಟ್ಕಳ
ಸಂಪರ್ಕ- 9945840552/9449099852

ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ. ತಂಬಾಕು ಸೇವನೆಯಂತ ಚಟದಿಂದ ಇಂದು ವಿಶ್ವವೇ ಅನೇಕ ಸಂಕಷ್ಟಕ್ಕೆ ತುತ್ತಾಗಿ ಸಾವಿರಾರು ಸಾವುಗಳು ಸಂಭವಿಸಿದೆ ಸಂಭವಿಸುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗಿಂತ ಯುವಕರೆ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ.ಇಂತ ಯುವ ಜನಾಂಗಕ್ಕೆ ಇದರಿಂದ ಆಗುವ ಹಾನಿ,ತೊ೦ದರೆಗಳನ್ನು ಅರ್ಥಮಾಡಿಸಲು ಜೊತೆಗೆ ಅನೇಕ ಸಾವು ನೋವು ಸಂಕಷ್ಟಗಳಿಗೆ ಕಾರಣವಾಗುತ್ತಿರುವ ಈ ತಂಬಾಕು ಎಂದರೆ ಏನು ಈ ವಿಷ ಪದಾರ್ಥಗಳ ಸೇವನೆ ಅದರ ದುಷ್ಪರಿಣಾಮಗಳ ಬಗ್ಗೆ ಕೊಂಚ ದೃಷ್ಠಿ ಹರಿಸುವ, ತನ್ಮೂಲಕ ಕೊಂಚವಾದರೂ ಬದಲಾವಣೆ ಸಾಧ್ಯವೆನೋ ಎನ್ನುವ ಆಶಾವಾದ ಇಂದಿನ ನನ್ನ ಈ ಲೇಖನದ ಹಂಬಲವಾಗಿದೆ.


ಹೊಗೆಯಸೊಪ್ಪು ಎನ್ನುವ ಒಂದು ರೀತಿಯ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ.


ಇದೇ ತಂಬಾಕನ್ನು ಉರಿಸಿ ಅದರ ಹೊಗೆಯ ರುಚಿಯನ್ನು ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ತಂಬಾಕಿನ ಇತಿಹಾಸ ಕ್ರಿಸ್ತಪೂರ್ವ ದಿಂದಲೇ ಇದ್ದಂತೆ ಕಾಣುತ್ತದೆ. ಕ್ರಿಸ್ತಪೂರ್ವ ೫೦೦೦-೩೦೦೦ದಷ್ಟು ಹಿಂದಕ್ಕೆ ದಕ್ಷಿಣ ಅಮೆರಿಕಾದಲ್ಲಿ ತಂಬಾಕನ್ನು ಕೃಷಿ ಉತ್ಪನ್ನದಂತೆ ಬೆಳೆಯುತ್ತಿದ್ದಾಗಿನ ದಿನಗಳಿಗೆ ಹೋಗುತ್ತದೆ; ಅನಂತರ ಅಕಸ್ಮಾತ್ತಾಗಿ ಬೆಂಕಿ ತಗುಲಿದ್ದರಿಂದಲೋ ಅಥವಾ ಇದರ ಸೇವನೆಯನ್ನು ಕಂಡುಹಿಡಿಯುವ ಹಲವು ಪ್ರಯತ್ನಗಳಲ್ಲೊಂದಾಗಿಯೋ ಇದನ್ನು ಹೊತ್ತಿಸುವ ಮೂಲಕ ಸೇವಿಸುವುದು ಆರಂಭವಾಯಿತು.

RELATED ARTICLES  ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ


ಬ್ಯಾಬಿಲೋನಿಯನ್ನರು, ಭಾರತೀಯರು ಮತ್ತು ಚೀನೀಯರೇ ಮುಂತಾದ ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಅಂಗವಾಗಿ ಧೂಪ ಹಾಕಲಾಗುತ್ತಿತ್ತು ಮತ್ತು ಈ ಆಚರಣೆಯು ಇಸ್ರೇಲೀಯರು ಮತ್ತು ನಂತರದ ಕ್ಯಾಥೊಲಿಕ್ ಮತ್ತು ಆರ್ಥೋಡಾಕ್ಸ್ ಕ್ರಿಶ್ಚಿಯನ್ ಚರ್ಚುಗಳಲ್ಲಿಯೂ ರೂಢಿಗೆ ಬಂದಿರಬಹುದು ಎಂದು ಕೆಲವು ಆಕರಗಳು ಹೇಳುತ್ತದೆ.

ವಿಶ್ವಾದ್ಯಂತ ಪ್ರತೀ ವರ್ಷ 5.4 ಮಿಲಿಯನ್ ಜನರು  ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ದುರಂತವೆಂದರೆ, ಇದರಲ್ಲಿ ಶೇಕಡ 80ರಷ್ಟು ಸಾವುಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುತ್ತಿವೆ. ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಎಂಟು ಪ್ರಮುಖ ಕಾರಣಗಳಲ್ಲಿ ತಂಬಾಕಿಗೆ ಆರನೇ ಸ್ಥಾನ. ಪ್ರತೀ ವರ್ಷ 8 ರಿಂದ 9 ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳಿಂದ ಸಾಯುತ್ತಿದ್ದಾರೆ. ಇವೆಲ್ಲವೂ ತಡೆಗಟ್ಟಬಹುದಾದ ಸಾವುಗಳು. ತಂಬಾಕು ಸೇವನೆಯಿಂದ ಬರುವ ರೋಗಗಳಿಂದಾಗಿ ಪ್ರತೀ ನಿತ್ಯ 2,200 ಮಂದಿ ಭಾರತೀಯರು ಸಾವನ್ನಪ್ಪುತ್ತಿದ್ದಾರೆ. ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಗೆ ತುತ್ತಾಗಿತ್ತಿರುವವರಲ್ಲಿ ಭಾರತೀಯರೇ ಹೆಚ್ಚು ಇದರಲ್ಲಿ ಶೇಕಡ 90ರಷ್ಟು ಬಾಯಿ ಕ್ಯಾನ್ಸರ್ ಗಳು ತಂಬಾಕಿನಿಂಹ ಬರುತ್ತಿವೆ. ಭಾರತದಲ್ಲಿ ಸುಮಾರು ಶೇಕಡ 50ರಷ್ಟು ರೋಗಗಳು ತಂಬಾಕು ಸೇವನೆಯಿಂದ ಬರುತ್ತಿವೆ. ಇವುಗಳು ಕೇವಲ ಊಹಾಪೋಹಗಳು ಆಗಿರದೆ ತಂಬಾಕು ಸೇವನೆಯ ಬಗ್ಗೆ ಜಗತ್ತಿನ ಆರೋಗ್ಯ ತಜ್ಞರು ಕಂಡುಕೊಂಡ ಸತ್ಯ.

RELATED ARTICLES  ಗುಜಾರಾತ್ ನಲ್ಲಿ ಬೆಳ್ಳಂಬೆಳಿಗ್ಗೆ ಕಂಪಿಸಿದ ಭೂಮಿ.

ವಿಶ್ವದೆಲ್ಲೆಡೆ ಸೇರಿದಂತೆ ಭಾರತದಲ್ಲಿ ತಂಬಾಕು ವಸ್ತುಗಳ ಮೇಲೆ ಕ್ಯಾನ್ಸರ್ ಸಂಬಂಧಿತ ಚಿತ್ರವನ್ನು ದೊಡ್ಡದಾಗಿ ಮುದ್ರಿಸಲಾಗುತ್ತಿದೆ. ಈ ಚಿತ್ರ ಚಟಕ್ಕೆ ದಾಸರಾದವರಲ್ಲಿ ಜಾಗೃತಿ ಮೂಡಿಸಲಿ ಎಂಬುದು ಆರೋಗ್ಯ ಇಲಾಖೆಯ ಉದ್ದೇಶ!

ಧೂಮಪಾನ ನಿಯಂತ್ರಣಕ್ಕೆ ತರಲು ಸರ್ಕಾರಗಳು ಅನೇಕ ಕಠಿಣ ಕ್ರಮ ತೆಗೆದುಕೊಂಡಿವೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಬಿಡಿ ಬಿಡಿ ಯಾಗಿ ಸಿಗರೇಟ್ ಮಾರುವುದಕ್ಕೂ ನಿಷೇಧ ಹೇರಲು ಚಿಂತನೆ ನಡೆದಿದೆ. ಅಲ್ಲದೇ ಪ್ರತಿಸಾರಿಯ ಬಜೆಟ್ ನಲ್ಲೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಮಾಡಲಾಗುತ್ತಿದೆ. ಆದರೆ ಸರ್ಕಾರ ಸಂಘ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡರು ಜಾಗೃತಿಯನ್ನಷ್ಟೇ ಮೂಡಿಸಬಹುದಾಗಿದೆ ಆದರೆ ಅಂತಿಮವಾಗಿ ಸಂಕಲ್ಪ ಮಾಡಬೇಕಾದರೂ ಈ ಚಟಗಳಿಗೆ ದಾಸರಾದವರೇ ಹೊರತು ಬೇರೆ ಯಾರಿಂದಲೂ ಸಾಧ್ಯವಾಗದು. ಪ್ರತಿಯೊಬ್ಬ ವ್ಯಸನಿಯೂ ತಾನು ತನ್ನ ಬದುಕು ತನ್ನ ಸ್ವಾಸ್ಥ್ಯ ಕುಟುಂಬ ಸಮಾಜ ಅರೋಗ್ಯ ವಂತ ದೇಶದ ಚಿಂತನೆಯನ್ನು ಮನದಲ್ಲಿ ತಂದುಕೊಂಡು ದೃಡ ಸಂಕಲ್ಪ ಮಾಡಿದ್ದೆ ಆದಲ್ಲಿ ಈ ತಂಬಾಕು ಸೇವನೆಯಂತ ವ್ಯಸನದಿಂದ ಆತ ಧಾರಾಳವಾಗಿ ಹೊರ ಬರಲು ಸಾಧ್ಯ. ಖಂಡಿತವಾಗಿಯೂ ಈ ಎಲ್ಲದರ ಹಿತದೃಷ್ಟಿಯಿಂದ ನಾವೆಲ್ಲರೂ ಇಂದೇ ಈ ವ್ಯಸನದಿಂದ ಹೊರಬರುವ ಸಂಕಲ್ಪ ಮಾಡೋಣ. ಆರೋಗ್ಯಪೂರ್ಣ ಸಮಾಜ ವ್ಯಸನಮುಕ್ತ ಸಮಾಜ ಈ ದೇಶಕ್ಕೆ ನಮ್ಮ ಕೊಡುಗೆಯಾಗಲಿ.