ಬೆಂಗಳೂರು: ಕೊರೊನಾ ಸ್ಫೋಟದ ನಡುವೆ ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಇದೀಗ ಮಕ್ಕಳ ಪೋಷಕರು ಆಭಿಯಾನ ಆರಂಭಿಸಿದ್ದಾರೆ.
ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ. ನನ್ನ ಮಕ್ಕಳನ್ನು ನಾನು ಶಾಲೆಗೆ ಕಳುಹಿಸಲ್ಲ. ಈ ಶೈಕ್ಷಣಿಕ ವರ್ಷ 2020 -21 ರಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಅಭಿಯಾನದ ಮೂಲಕ ಪೋಷಕರು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ.
ವಾಟ್ಸಾಪ್ ಸ್ಟೇಟಸ್ ಮತ್ತು ಫೇಸ್ ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಷಕರು ಈ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ.
ಶಾಲೆಯಲ್ಲಿ ಕೊರೊನಾದಿಂದ ಮಕ್ಕಳ ಜಾಗೃತೆ ಮಾಡೋದು ಹೇಗೆ?, ಆರೋಗ್ಯಕ್ಕಿಂತ ಶಾಲೆ ಮುಖ್ಯವಲ್ಲ ಅನ್ನೋ ನಿರ್ಧಾರಕ್ಕೆ ಪೋಷಕರು ಬಂದಿದ್ದಾರೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.
ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ ಪ್ರಾರಂಭ ಮಾಡಲು ಅವಕಾಶ ನೀಡಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜೂನ್ 8 ರಿಂದ ದಾಖಲಾತಿ ಪ್ರಕ್ರಿಯೆಗೆ ಸಿದ್ಧತೆ ಆರಂಭವಾಗಲಿದ್ದು, ಜೂನ್ 8ರಿಂದ ಖಾಸಗಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಅಲ್ಲದೇ ಜೂನ್ 15 ಒಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ಮಾಹಿತಿ ಕೊಡಲು ಶಿಕ್ಷಣ ಇಲಾಖೆ ಸೂಚಿಸಿದೆ.