ಕುಮಟಾ: ಮಾನವ ತನ್ನ ಸ್ವಾರ್ಥ ಸುಖಕ್ಕಾಗಿ ಪ್ರಕೃತಿಯನ್ನು ಮನಬಂದಂತೆ ಬಳಸಿಕೊಳ್ಳತೊಡಗಿದರೆ, ಪರಿಸರ ಅಸಮತೋಲನ ಏರ್ಪಟ್ಟು ಹಾಗೂ ಅನೈರ್ಮಲ್ಯತೆ ತಾಂಡವವಾಡಿ ಸಾಂಕ್ರಾಮಿಕ ಕಾಯಿಲೆಗಳ ನೆಲೆಬೀಡಾಗುತ್ತದೆ. ಕಾಣದ ಸೂಕ್ಷಾಣು ಜೀವಿ ಮತ್ತು ವೈರಸ್ ಉದ್ಭವಗೊಳ್ಳಬಹುದಾಗಿದ್ದು, ಇಂದು ವಿಶ್ವ ಕೋವಿಡ್-19 ವೈರಾಣುವಿನ ಸೋಂಕಿನಿಂದ ಹೈರಾಣಾಗುತ್ತಿರುವಂತೆ ಜೀವಸಂಕುಲ ತತ್ತರಿಸುತ್ತದೆ. ಜಗತ್ತು ಎದುರಿಸುತ್ತಿರುವ ಭೀಕರತೆಗೆ ಪರಿಸರದ ವ್ಯತಿರಿಕ್ತ ಪ್ರಭಾವವೂ ಕಾರಣವಾಗಿರಬಹುದೆಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅವರು ಶಾಲೆಯ ಕಸ್ತೂರಬಾ ಇಕೋ ಕ್ಲಬ್ ಅಡಿಯಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತನ್ನ ಸಹೋದ್ಯೋಗಿಗಳನ್ನು ಉದ್ದೇಶಿಸಿ ಸಮಾಲೋಚಿಸಿದರು.
ಇಕೋಕ್ಲಬ್ ಸಂಚಾಲಕ ಶಿಕ್ಷಕ ಕಿರಣ ಪ್ರಭು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ನಗರೀಕರಣ, ಔದ್ಯೋಗೀಕರಣ, ವಿಜ್ಞಾನ ತಂತ್ರಜ್ಞಾನದ ಬಹುಬಳಕೆಯಿಂದ ಪರಿಸರ ನಲುಗುತ್ತಿದೆ. ನಾವು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು. ಹಿರಿಯ ಶಿಕ್ಷಕ ವಿ.ಎನ್.ಭಟ್ಟ ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಇದ್ದು ನಾವು ಸಾರ್ವಜನಿಕವಾಗಿಯೂ ಗಿಡ ನೆಡುವ ಯೋಜನೆಗೆ ಸಹಕರಿಸೋಣ ಎಂಬ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾವರಣದಲ್ಲಿ ವಿವಿಧ ಜಾತಿಯ ಗಿಡ ನೆಡುವ ಮೂಲಕ ಶಿಕ್ಷಕರಾದ ಸುರೇಶ ಪೈ, ಅನಿಲ್ ರೊಡ್ರಗೀಸ್, ಪ್ರದೀಪ ನಾಯ್ಕ, ಅನ್ನಪೂರ್ಣ, ಚಂದ್ರಕಲಾ, ಪವಿತ್ರಾ, ನಾಗರತ್ನಾ, ಅಂಕಿತಾ ಮತ್ತು ಪ್ರಶಾಂತ ತಾವು ನೆಟ್ಟ ಗಿಡವನ್ನು ಪೋಷಿಸಿ ಸಂರಕ್ಷಿಸುವುದಾಗಿ ಪ್ರತಿಜ್ಞೆಗೈದರು.