ಕುಮಟಾ : ಭಂಡಾರಿ ಸಮಾಜದ ಬಡ ಕುಟುಂಬಗಳಿಗೆ ಕಡತೊಕಾದಲ್ಲಿಂದು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ ವೈಯಕ್ತಿಕವಾಗಿ ದಿನಸಿ ಕಿಟ್ ವಿತರಿಸಿದರು.
ಪಂಚವಾದ್ಯವನ್ನೇ ವೃತ್ತಿ ಯಾಗಿಸಿಕೊಂಡಿರುವ ಭಂಡಾರಿ ಸಮಾಜವಿಂದು ಸಂಕಷ್ಟಕ್ಕೊಳಗಾಗಿದೆ. ಲಾಕ್ ಡೌನ್ ಪ್ರಾರಂಭದಿಂದ ಇಂದಿನವರೆಗೂ ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಪಂಚವಾದ್ಯ ನುಡಿಸುವುದು ಪಾವಿತ್ರ್ಯತೆಯ ದ್ಯೋತಕವಾಗಿದೆ. ಇಂದು ಯಾವುದೇ ಸಮಾರಂಭಗಳಿಲ್ಲದೆ ಭಂಡಾರಿ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಇಂತಹ ಹಲವು ಕುಟುಂಭಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ, ಕೋವಿಡ್-19 ಸಾಂಸರ್ಗಿಕ ರೋಗದಿಂದಾಗಿ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ನಮ್ಮ ದೇಶವೂ ಹೊರತಲ್ಲ. ಅಂತೆಯೇ ನಾವೆಲ್ಲ ಪರಸ್ಪರ ಸಹಾಯ ಸಹಕಾರಗಳಿಂದ ಈ ಸಂಕಷ್ಟವನ್ನು ಎದುರಿಸಿ ನಿಲ್ಲಬಹುದಾಗಿದೆ. ಅಲ್ಲದೆ ಸಾಮಾಜಿಕ ಅಂತರ ಮತ್ತು ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಸಿದ್ಧ ಸ್ವಯಂಭೂ ದೇವಾಲಯದ ಅರ್ಚಕ ಷಡಾನನ ಭಟ್ಟ, ಸೇವಾ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಹೆಗಡೆ, ಎಲ್ ಎನ್ ಭಟ್ಟ, ಶ್ರೀನಾಥ್ ಶೆಟ್ಟಿ, ಎಚ್ ಎಸ್ ಭಂಡಾರಿ, ಶಂಕರ ಭಂಡಾರಿ, ಅರುಣ ಭಂಡಾರಿ, ಅರುಣ ನಾಯ್ಕ್, ಬಾಲು ಭಂಡಾರಿ, ಕಿರಣ ಭಂಡಾರಿ, ಜಗದೀಶ್ ನಾಯ್ಕ್ ಮುಂತಾದ ಹಲವಾರು ಉಪಸ್ಥಿತರಿದ್ದರು.