ನಾವು ದೇವರಿಗೆ ಗುರುಗಳಿಗೆ ತೆಂಗಿನಕಾಯಿ ಇಟ್ಟು ವಂದಿಸುತ್ತೇವೆ. ಹಾಗಾದರೆ ಇದರ ಮಹತ್ವವೇನು..? ತೆಂಗಿನಕಾಯಿ…. ಏನಿದರ ವಿಶೇಷ ? ಕಗ್ಗದ ಸಾಲುಗಳನ್ನು ಗಮನಿಸಿ. *ಹೊರಗೆ ಲೋಕಾಸಕ್ತಿ ಒಳಗೆ ಸಕಲ ವಿರಕ್ತಿ. ಹೊರಗೆ ಕಾರ್ಯ ಧ್ಯಾನ ಒಳಗುದಾಸೀನ. ಹೊರಗೆ ಸಂಸ್ಕೃತಿ ಭಾರ, ಒಳಗದರ ತಾತ್ಸಾರ. ವರಯೋಗ ಸೂತ್ರವಿದು -ಮಂಕುತಿಮ್ಮ .
ಈ ಕಗ್ಗಕ್ಕೂ ತೆಂಗಿನಕಾಯಿಗೂ ತುಂಬಾ ಹೋಲಿಕೆಯಿದೆ. ಈ ಕಗ್ಗಕ್ಕೂ ಸಂತರಿಗೂ ತುಂಬಾ ತುಂಬಾ ಹೋಲಿಕೆ ಇದೆ. ತೆಂಗಿನಕಾಯಿಗೆ ಮೂರು ಕಣ್ಣು ಸಂತರಿಗೆ ಹಾಗೆಯೇ….! ಸಂಸಾರವನ್ನು ನೋಡಲು ಎರಡು ಕಣ್ಣು….ಪರಮಾತ್ಮನನ್ನು ನೋಡಲು ಒಂದು ಕಣ್ಣು. ಭುವಿಯನ್ನು ನೋಡುವ ಅಂದರೆ ರಜೋ ತಮೋ ಗುಣವನ್ನು ನೋಡುವ ಎರಡು ಕಣ್ಣು. ಸತ್ವಗುಣವನ್ನು ನೋಡುವ ಮೂರನೇ ಕಣ್ಣು. ಭವದ ಎರಡು ಕಣ್ಣು ಭಾವದೊಂದು ಕಣ್ಣು. ತೆಂಗಿನ ಕಾಯಿಯಂತೆ ಸಂತರಂತೆ ನಾವು ಮುಕ್ಕಣ್ಣ ರಾಗಬೇಕು ಆದರೆ ನಾವು ಮುಕ್ಕುವ ಅಣ್ಣ ರಾಗಿದ್ದೇವೆ. ಭೋಗ ಸಂಸ್ಕೃತಿಯಲ್ಲಿ ಮುಳುಗುತ್ತಿದ್ದೇವೆ.

ತೆಂಗಿನಕಾಯಿ ಹೊರಗೆ ನಿಸ್ಸಾರ ಒಳಗೆ ಮಧುರ ಸಾರ. ಸಂತರ ಬದುಕೂ ಹಾಗೆಯೆ. ಹೊರಗಿನಿಂದ ನೋಡಿದರೆ ಅದು ನಿಸ್ಸಾರ ಆದರೆ ಒಳಗೆ ನೋಡಿದರೆ ಮಧುರ ಸಾರ. ಭಗವಂತನ ಸಾಕ್ಷಾತ್ಕಾರ. ತೆಂಗಿನ ಚಿಪ್ಪಿನಂತೆ ಅವರ ಹೊರ ಬದುಕು ನಿಸ್ಸಾರವಾಗಿ ಕಾಣುತ್ತದೆ ಆದರೆ ಸಂತರ ಅಂತರಂಗದ ಒಳಗೆ ಹೋದರೆ ಅದು ತೆಂಗಿನ ತಿರುಳಿನಷ್ಟೇ ಸಾತ್ವಿಕ, ಪುಷ್ಟಿ ,ಪೂರ್ಣ ಶಾಂತಿ ನೆಮ್ಮದಿ. ನಾವು ಕೂಡ ತೆಂಗಿನ ಕಾಯಿಯಂತೆ ,ಸಂತರಂತೆ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು.

RELATED ARTICLES  ನನ್ನ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

ತೆಂಗಿನಕಾಯಿ ಕೆಲಸಮಯ ಬಿಟ್ಟರೆ ಕೊಬ್ಬರಿಯಾಗುತ್ತದೆ. ಕರಟದ ಒಳಗಿರುತ್ತದೆ ಆದರೆ ಅದಕ್ಕೆ ಅಂಟಿ ಕೊಂಡಿರುವುದಿಲ್ಲ. ಅಂಟು ಕಳಕೊಂಡಿದೆ. ಸಂತರೂ ಹಾಗೆ ವಿರಕ್ತಿ ಎಂದರೆ ಅಂಟು ಕಳೆದುಕೊಳ್ಳುವುದು. ಶ್ರೀಕೃಷ್ಣ ಹೇಳಿದ್ದು ಇದನ್ನೇ…….. ಯಾರಿಗೆ ನಾನು ಎನ್ನುವುದು ಹೋಗಿದೆಯೋ ಯಾರ ಬುದ್ಧಿ ಮನಸ್ಸು ಸಂಸಾರಕ್ಕೆ ಪ್ರಾಪಂಚಿಕ ವಿಷಯಕ್ಕೆ ಅಂಟಿಕೊಂಡಿಲ್ಲವೋ ಅಂಥವನು ಈ ಲೋಕವನ್ನೇ ಕೊಂದರೂ, ಧ್ವಂಸಗೊಳಿಸಿದರೂ ಪಾಪ ಅವನಿಗೆ ತಟ್ಟುವುದಿಲ್ಲ ಅಂತ. ಲೇಪ ಇದ್ದವರಿಗೆ ಮಾತ್ರ ಪಾಪ. ಅಂಟು ಇದ್ದವರಿಗೆ ಮಾತ್ರ ಪಾಪದ ಗಂಟು.* ಇದು ಕೊಬ್ಬರಿಯ ಸ್ಥಿತಿ. ಇರಬೇಕು ಇದ್ದೂ ಇರದಂತಿರ ಬೇಕು ಕಮಲದ ದಳದಂತೆ. ಅದು ನೀರೊಳಗೆ ಇದೆ ಆದರೆ ನೀರಿಗೆ ಅಂಟಿಕೊಂಡಿಲ್ಲ. ನಾವು ಹಾಗಿರಬೇಕು. ನಾವು ಪ್ರಪಂಚಕ್ಕೆ ಅಂಟಿಕೊಳ್ಳದಿದ್ದಾಗ ಪರಮಾತ್ಮನಿಗೆ ಅಂಟಿಕೊಳ್ಳುತ್ತೇವೆ.

ಸಂತರ ಬದುಕು ಸಮುದ್ರದ ಹಾಗೆ. ಮೇಲೆ ತೆರೆಗಳು ಒಳಗೆ ಶಾಂತ. ದಡದಲ್ಲಿ ಅಲೆಗಳ ಅಬ್ಬರ ಮುಂದೆ ಹೋದರೆ ಸಂಪೂರ್ಣ ಶಾಂತ. ನಾವು ನಮ್ಮ ಬದುಕನ್ನು ಹೀಗೆ ರೂಪಿಸಿಕೊಳ್ಳಬೇಕು. ನಮ್ಮ ಜೀವನದ ಒತ್ತಡ, ಜಂಜಾಟಗಳ ಮಧ್ಯದಲ್ಲಿಯೂ ಅಂತರಂಗವನ್ನು ಶಾಂತವಾಗಿ ಇಟ್ಟುಕೊಳ್ಳಬೇಕು.

ಒಂದು ಮರುಭೂಮಿ. ಗುಂಪಿನಲ್ಲಿದ್ದ ಇಬ್ಬರು ದಾರಿ ತಪ್ಪಿದರು. ಮುಂದೆ ಮುಂದೆ ಹೋದಾಗ ಅಲ್ಲೊಂದು ಓಯಸಿಸ್ ಕಂಡಿತು. ಅದನ್ನು ಕಂಡ ಒಬ್ಬ ಅತ್ಯಂತ ಸಂತೋಷದಿಂದ ಅಲ್ಲಿಗೆ ಓಡಿದ. ಇನ್ನೊಬ್ಬ ಇಲ್ಲಿ ಓಯಸಿಸ್ ಇದೆ ಎಂಬುದನ್ನು ತನ್ನ ಬಳಗದ ಎಲ್ಲರಿಗೂ ತಿಳಿಸೋಣ ಎಂದು ಹಿಂದಕ್ಕೆ ತೆರಳಿದನಂತೆ. ಸಂತರ ಬದುಕೆಂದರೆ ಅದು ಎರಡನೇ ಯವನಂತೆ. ಅವರು ಕಂಡ ಪರಮಾತ್ಮನನ್ನು, ಪರಮ ಸುಖವನ್ನು ಶಿಷ್ಯನಿಗೆ ತಿಳಿಸುವ, ಅವರೂ ಆ ಸ್ಥಿತಿಗೆ ಬರುವಂತೆ, ಅದರ ಸಂತಸ ಅನುಭವಿಸುವಂತೆ ಮಾಡುವ ಮನಸ್ಥಿತಿ ಅವರದ್ದು. ತೆಂಗಿನ ತಿರುಳಿನ ಮಧುರತೆಯನ್ನು ಅನುಭವಿಸಬೇಕೆಂದರೆ ಕರಟವನ್ನು ದಾಟಿ ಹೋಗಬೇಕು ಬದುಕಿನ ಆನಂದವನ್ನು ಪರಮ ಸುಖವನ್ನು ಅನುಭವಿಸಬೇಕೆಂದರೆ ಪ್ರಾಪಂಚಿಕ ವಿಷಯಗಳನ್ನು ಮರೆಯಬೇಕು ಅಥವಾ ಮೀರಬೇಕು.

ಹಣ್ಣು ಕಳಚಿ ಬೀಳುವಂತೆ ನನ್ನ ನೀನು ಬೀಳಿಸು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು. ಕಾಯಿಯ ತೊಟ್ಟು ಮರಕ್ಕೆ ಅಂಟಿಕೊಂಡಿರುತ್ತದೆ ಅದು ರಕ್ತಿ. ಹಣ್ಣಾಗಿ ಅದು ತಾನಾಗಿ ಮರದಿಂದ ಕಳಚಿಕೊಳ್ಳುತ್ತದೆ ಅದು ವಿರಕ್ತಿ. ನಾವು ಅಂತಹ ಸಹಜವಾದ ಸುಖದ ಬದುಕಿನ ಅಂತ್ಯವನ್ನು ಬಯಸುವುದಾದರೆ ನಮ್ಮನ್ನು ಮುಸುಕಿರುವ ಅಜ್ಞಾನವೆಂಬ ಕತ್ತಲೆಯನ್ನು ದಾಟಿ ಜ್ಞಾನವೆಂಬ ಬೆಳಕಿನ ಲೋಕವನ್ನು ಪ್ರವೇಶಿಸಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ಆಸಕ್ತಿ ಬೇಕು, ಶ್ರದ್ಧೆ ಬೇಕು, ನಿಷ್ಠೆ ಬೇಕು ,ಪ್ರಯತ್ನ ಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಅಂತರಂಗ ಶುದ್ಧವಾಗಿರಬೇಕು. ಅಂದಾಗ ಮಾತ್ರ ತೆಂಗಿನ ಕರಟ ದಂತಿರುವ ಪ್ರಾಪಂಚಿಕ ವಿಷಯಗಳನ್ನು ಮೀರಿ ಅದರ ತಿರುಳುನಂತಿರುವ ಪಾರಮಾರ್ಥಿಕ ಸುಖವನ್ನು ಪಡೆಯಲು ಸಾಧ್ಯ.

RELATED ARTICLES  ನೆರೆ ಪೀಡಿತ ಕುಮಟಾದ ಹೆಗಡೆಯ ಜನರಿಗೆ ನೆರವಾದ ಶ್ರೀ ರಾಮಚಂದ್ರಾಪುರ ಮಠ

✍️ ಡಾ.ರವೀಂದ್ರ ಭಟ್ಟ ಸೂರಿ.