ಕುಮಟಾ: ಇಲ್ಲಿಯ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ನೂತನ ರೋಟರಿ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು. ಪಲ್ಸ್ ಪೋಲಿಯೋ ನಿರ್ಮೂಲನೆಯಲ್ಲಿ ಸೈನಿಕರು ಹೋರಾಡಿದಂತೆ ರೋಟರಿ ಕಾರ್ಯ ನಿರ್ವಹಿಸಿದದದ ರೀತಿ ಇಂದು ಜಗತ್ತನ್ನು ಕಾಡುತ್ತಿರುವ ಕೊವಿಡ್-19 ಮಹಾ ಮಾರಿಯನ್ನು ನಿಗ್ರಹಿಸಿ ಮುಕ್ತಗೊಳಿಸಲು ರೋಟರಿ ಪರಿಚಾರಕರು ಪಣ ತೊಡಬೇಕಾಗಿದೆ ಎಂದು ಬೆಳಗಾವಿಯಿಂದ ಆಗಮಿಸಿದ ಪದಗ್ರಹಣಾಧಿಕಾರಿಯಾಗಿ ರೊ. ಶರದ್ ಪೈ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊರೊನಾಕ್ಕೆ ಸೂಕ್ತ ಔಷಧ ಭಾರತದಿಂದಲೇ ತಯಾರಾಗುವ ಸಾಧ್ಯತೆ ಗೋಚರವಾಗುತ್ತಿದ್ದು, ಆದಷ್ಟು ಶೀಘ್ರಗತಿಯಲ್ಲಿ ಅದು ಪ್ರಾಪ್ತಿಯಾಗಿ ಸಮುದಾಯಕ್ಕೆ ಲಭ್ಯವಾಗಿ ಕೊರೋನಾ ಕಾಟದಿಂದ ಲೋಕ ಬಿಡುಗಡೆಗೊಳ್ಳುವಂತಾಗಲಿ ಎಂದು ಹಾರೈಸಿದರು. ಅವರು ರೋಟರಿಯ ನೂತನ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡುತ್ತಿದ್ದರು. ಗ್ಲೋಬಲ್ ಗ್ರ್ಯಾಂಟ್ ಅಡಿಯಲ್ಲಿ ಕುಮಟಾಕ್ಕೆ ಉತ್ತಮ ಕೊರೊನಾ ಆಸ್ಪತ್ರೆಗೆ ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.
ನೂತನ ಅಧ್ಯಕ್ಷ ಶಶಿಕಾಂತ ಕೊಳೇಕರ, ಕಾರ್ಯದರ್ಶಿ ಅತುಲ್ ಕಾಮತ, ಖಜಾಂಚಿ ಕಿರಣ ನಾಯಕ ಹಾಗೂ ಇತರ ಪದಾಧಿಕಾರಿಗಳಿಗೆ ರೋಟರಿ ಗೌರವ ದೀಕ್ಷೆ ನೀಡಲಾಯಿತು. ಅಧಿಕಾರ ಸ್ವೀಕರಿಸಿದ ನೂತನ ರೋಟರಿ ಅಧ್ಯಕ್ಷರು ಅಗತ್ಯವಾದುದನ್ನು ಸಾಧಿಸಲು ಎಲ್ಲರ ಸಹಕಾರ ಕೋರಿದರು. ಇದಕ್ಕೂ ಮೊದಲು ಮಾತನಾಡಿದ ನಿರ್ಗಮಿತ ರೋಟರಿ ಅಧ್ಯಕ್ಷ ಸುರೇಶ ಭಟ್, ಸಮುದಾಯದ ಸಂಕಟದಲ್ಲಿ ಕುಮಟಾ ರೋಟರಿ ನಾಗರಿಕರಿಗೆ ನೆರವಾದ ಬಗೆಯನ್ನು ತಿಳಿಸಿದರು. ನಿರ್ಗಮಿತ ಕಾರ್ಯದರ್ಶಿ ಕಿರಣ ನಾಯಕ ವಾರ್ಷಿಕ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ರೋಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷ ಸುದರ್ಶನ ಶಾನಭಾಗ, ಕಾರ್ಯದರ್ಶಿ ಪವನ ಪ್ರಭು ಅವರಿಗೆ ರೋಟರಿ ಅಸಿಸ್ಟಂಟ್ ಗವರ್ನರ್ ಪ್ರವೀಣ ಕಾಮತ ಪ್ರತಿಜ್ಞಾ ವಿಧಿ ಬೋಧಿಸಿ, ರೋಟರಿಯ ಧ್ಯೇಯವಾಕ್ಯದ ಬ್ಯಾನರ್ ಅನವಾರಣಗೊಳಿಸಿ ಮಾತನಾಡುತ್ತಾ, ನೊಂದವರ ಅಸಾಯಕರ ಧ್ವನಿಗೆ ಆಸರೆಯಾಗುತ್ತಾ ಬಂದಿರುವ ರೋಟರಿಯ ಪರಮ ಧ್ಯೇಯ ಸೇವಾಮನೋಭಾವನೆಯನ್ನು ಕಾಯ್ದುಕೊಂಡು ಹೋಗಬೇಕಾದ ಕಠಿಣ ಪರಿಸ್ಥಿತಿಯ ಸವಾಲು ನಮ್ಮೆದುರಿಗಿದ್ದು, ಅದನ್ನೆದುರಿಸಲು ರೋಟರಿ ಕಟಿಬದ್ಧವಾಗಬೇಕೆಂದು ಕರೆ ನೀಡಿದರು.
ಪ್ರಾರಂಭದಲ್ಲಿ ಅನೆಟ್ ಶ್ರೀ ರಾವ್ ಪ್ರಾರ್ಥಿಸಿದರು. ಜಾಗತಿಕ ಶಾಂತಿ ಹಾಗೂ ಇತ್ತೀಚೆಗೆ ಅಸ್ತಂಗತರಾದ ರೋಟರಿ ಸಂಸ್ಥಾಪಕ ಸದಸ್ಯ ಗುರುದಾಸ ಗಾಯ್ತೊಂಡೆ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಿದ್ದಾಪುರ ಮನುವಿಕಾಸದ ಗಣಪತಿ ಭಟ್ಟ ಹಾಗೂ ಎಂಜೆಎಫ್ ಲಯನ್ ಡಾ. ಗಿರೀಶ ಕುಚ್ಚಿನಾಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಅತುಲ್ ಕಾಮತ್ ಕೊನೆಯಲ್ಲಿ ವಂದಿಸಿದರು. ಎನ್.ಆರ್.ಗಜು ಹಾಗೂ ವಿನಾಯಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರೊ. ಡಾ. ನಮೃತಾ ಶಾನಭಾಗ, ಏನ್ ಸಂಧ್ಯಾ ಹೆಗಡೆ, ಅನೆಟ್ ಚಂದನ್ ಕುಬಾಲ, ಅನೆಟ್ ನಜೀಫಾ ಮುಲ್ಲಾ ಅತಿಥಗಳನ್ನು ಪರಿಚಯಸಿದರು. ಹೈಟೆಕ್ ಆಸ್ಪತ್ರೆ ವತಿಯಿಂದ ಥರ್ಮಲ್ ಸ್ಕ್ಯಾನಿಂಗ್, ಸೆನಿಟೈಸಿಂಗ್, ಸೋಸಿಯಲ್ ಡಿಸ್ಟನ್ಸ್ ವ್ಯವಸ್ಥೆಗೊಳಿಸಲಾಗಿತ್ತು.