ಕುಮಟಾ : ಕೋವಿಡ್ -19 ನಿಂದ ಜನರನ್ನು ರಕ್ಷಿಸುವ ಕಾರ್ಯಕ್ಕಾಗಿ ಭಾರತದಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ಹಾಗೂ ಸರಕಾರಿ ಕ್ವಾರಂಟೈನ್ ವ್ಯವಸ್ಥೆಗೆ ಬಳಸಿಕೊಂಡಿದ್ದ ತಾಲೂಕಿನ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಅಂಗ ಸಂಸ್ಥೆಗಳ ಕಟ್ಟಡ, ಆವಾರ ಹಾಗೂ ಶಾಲಾಬಸ್ ಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಲಾಗಿದೆ. ಮೇ 30 ಕ್ಕೆ ಇಲ್ಲಿ ಕ್ವಾರಂಟೈನ್ ಮುಕ್ತಾಯ ಮಾಡಲಾಗಿತ್ತು. ತದ ನಂತರ ಎರಡು ವಾರ ಆ ಜಾಗವನ್ನು ಯಾರೂ ಓಡಾಡದಂತೆ ನಿಶೇಧಿಸಲಾಗಿತ್ತು. ತದ ನಂತರ ಸರಕಾರದವರು ಹಾಗೂ ಸ್ಥಳೀಯ ತಾಲೂಕಾಡಳಿತ ಪರಿಣಿತ ಸ್ಯಾನಿಟೈಸರ್ ಮಾಡುವ ಸಿಬ್ಬಂಧಿಗಳಿಂದ ಸಂಪೂರ್ಣವಾಗಿ ಶುಚಿಗೊಳಿಸಿ ಸ್ಯಾನಿಟೈಸರ್ ಸ್ಪ್ರೇ ಮಾಡಿಸಿತ್ತು. ಸರಕಾರದಿಂದ ಎರಡುಬಾರಿ ಸ್ಯಾನಿಟೈಸಿಂಗ್ ಆದ ನಂತರ ಸಂಸ್ಥೆಯ ಆಡಳಿತ ಮಂಡಳಿ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಿಸಿದೆ. ಎಲ್ಲಾ ಕೋಣೆಗಳು, ಶಾಲಾ ಬಸ್ ಹಾಗೂ ಶಾಲಾ ಸಾಮಗ್ರಿಗಳೆಲ್ಲವನ್ನೂ ಸ್ಯಾನಿಟೈಸಿಂಗ್ ಗೆ ಒಳಪಡಿಸಲಾಗಿದೆ.
ಸಂಸ್ಕಾರ, ಸಂಸ್ಕೃತಿ,ರಾಷ್ಟ್ರಪ್ರೇಮ, ರಾಷ್ಟ್ರ ಜಾಗ್ರತಿಯ ಬಗ್ಗೆ ಬೋಧನೆ ಮಾಡುತ್ತಲೇ ಬಂದಿರು ಕೊಂಕಣ ಸಂಸ್ಥೆ, ದೇಶಕ್ಕೇ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ಜನತೆಯ ಜೀವ ಉಳಿವಿಗೆ ಅಗತ್ಯವಾಗಿದ್ದ ಕ್ವಾರಂಟೈನ್ ಗೆ ಬೇಕಾದ ವ್ಯವಸ್ಥೆಯನ್ನು ಒದಗಿಸುವಲ್ಲಿ ತಾನೇ ಮುಂದೆಬಂದು ಅವಕಾಶ ಮಾಡಿಕೊಡುವ ಮೂಲಕ ಸಂಸ್ಥೆಯ ಗುರಿ ಹಾಗೂ ಧ್ಯೇಯವನ್ನು ಕೇವಲ ಮಾತುಗಳಲ್ಲಿ ಹೇಳಿದ್ದಷ್ಟೇ ಅಲ್ಲದೆ ಕೃತಿಯಲ್ಲಿಯೂ ಮಾಡಿ ತೋರಿಸುವ ಮೂಲಕ ಮಾದರಿ ಎನಿಸಿತು. ಒಂದು ಖಾಸಗಿ ಶಿಕ್ಷಣ ಸಂಸ್ಥೆಯಾಗಿದ್ದರೂ ತಾನು ದೇಶಕ್ಕಾಗಿ ಮಾಡಲೇ ಬೇಕಾದ ಅಗತ್ಯ ಕರ್ತವ್ಯವನ್ನು ನಿಭಾಯಿಸಿರುವ ಕೊಂಕಣ ಸಂಸ್ಥೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿರುತ್ತದೆ. ಇದೀಗ ಶಾಲಾ ಆವಾರ ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಆಗಿದೆ. ಮಕ್ಕಳ ಸುರಕ್ಷತೆಯೇ ಸಂಸ್ಥೆಗೆ ಮುಖ್ಯವಾಗಿದ್ದು ಅದಕ್ಕಾಗಿಯೇ ಮೂರುಬಾರಿ ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಲಾಗಿದೆ.
ಮೊದಲ ಸ್ಯಾನಿಟೈಸಿಂಗ್ ಸಂದರ್ಭದಲ್ಲಿ ಕುಮಟಾ ಉಪವಿಭಾಗಾಧಿಕಾರಿಗಳಾದ ಅಜಿತ್ ಎಂ ಹಾಗೂ ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ್ ಎಂ ಅವರೇ ಸ್ವತಃ ಸ್ಥಳಕ್ಕೆ ಬಂದು ಸ್ಯಾನಿಟೈಸಿಂಗ್ ವ್ಯವಸ್ಥೆ ಗಮನಿಸಿದ್ದರು. ತದನಂತರದಲ್ಲಿ ಒಂದು ವಾರದ ಬಳಿಕ ಎರಡನೇ ಸುತ್ತಿನ ಸ್ಯಾನಿಟೈಸಿಂಗ್ ಮಾಡಲಾಗಿತ್ತು ಇದೀಗ ಮೂರನೇ ಹಂತದ ಸ್ಯಾನಿಟೈಸಿಂಗ್ ಮಾಡಲಾಗಿದ್ದು ಸಂಸ್ಥೆಯ ಸಿಬ್ಬಂಧಿಗಳು ಸ್ವಚ್ಚತೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಆಡಳಿತಮಂಡಳಿಯ ಸದಸ್ಯರು ಸ್ಯಾನಿಟೈಸಿಂಗ್ ಸಂದರ್ಭದಲ್ಲಿ ಖುದ್ದು ಹಾಜರಿದ್ದು ತೀರಾ ಮುತುವರ್ಜಿಯಿಂದ ಕೆಲಸ ಮಾಡಿಸಿದ್ದಾರೆ.