ಕುಮಟಾ: ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಕರೋನಾ ಕೋವಿಡ 19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನಲ್ಲಿ ಕಳೆದ ಮೂರು ದಿನಗಳ ಹಿಂದೆ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯ ವರಗೆ ಸ್ವಯಂ ಪ್ರೇರಿತ ಬಂದ್ ಆಚರಿಸಿಕೊಳ್ಳುವಂತೆ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರು ನೀಡಿದ್ದ ಕರೆಯು ಶೇಕಡಾ 90 ಯಶಸ್ವಿಯಾಗಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೆ ಇಂದು ಕುಮಟಾ ಪುರಸಭೆಯು ಮಾಸ್ಕ್ ಧರಿಸದೇ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಮತ್ತು ಮಾಸ್ಕ್ ಧರಿಸದೇ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರಿಗೆ ದಂಡ ವಿಧಿಸಲು ಮುಂದಾಗಿದೆ. ಮಾಸ್ಕ್ ಧರಿಸದೆ ಮತ್ತು ಹೊಂದದೆ ಇರುವವರನ್ನು ಪರಿಗಣಿಸಿ ಸರ್ಕಾರದ ಸುತ್ತೋಲೆಯಂತೆ ತಲಾ ಒಬ್ಬರಿಗೆ 100 ರೂ ರಂತೆ ಒಟ್ಟೂ 30 ಜನರಿಂದ 3 ಸಾವಿರ ರೂ ವಸೂಲಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ, ಪ್ರಮುಖರಾದ ಮಹೇಂದ್ರ ಎಮ್.ವಿ, ದಿಲೀಪ ನಾಯ್ಕ, ಶ್ರೀಧರ ಗೌಡ, ಸುದೀರ ಗೌಡ, ಹರ್ಷ ಗಾಂವಕರ್ ಸೇರಿದಂತೆ ಹಲವರು ಇದ್ದರು.
ಸಾರ್ವಜನಿಕರು ಮನೆಯಿಂದ ಹೊರಬಂದಾಗ ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕೊರೋನಾ ನಿಯಂತ್ರಿಸುವಲ್ಲಿ ಮೊದಲ ಹೆಜ್ಜೆಯಾಗಿದ್ದು ಇದನ್ನು ಪಾಲಿಸುವಂತೆ ಮುಖ್ಯಾಧಿಕಾರಿಗಳಾದ ಸುರೇಶ ಎಮ್.ಕೆ ಸಾರ್ವಜನಿಕರಲ್ಲಿ ಕೋರಿದ್ದಾರೆ.