ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದ ಒಂದರಿಂದ ಹತ್ತನೇ ತರಗತಿಯವರೆಗೆ ಅನ್ವಯವಾಗುವಂತೆ ಪಠ್ಯವನ್ನು ಶೇ.30ರಷ್ಟು ಕಡಿತಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಆ.15ರ ಅನಂತರ ಕೇಂದ್ರದ ಮಾರ್ಗಸೂಚಿಯನ್ವಯ ರಾಜ್ಯ ಸರಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ವರ್ಷ ಪೂರ್ಣ ಪಠ್ಯ ಬೋಧನೆ ಅಸಾಧ್ಯವಿರುವುದರಿಂದ ಶೇ.30ರಷ್ಟು ಕಡಿತಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಗೆ ಸೂಚನೆ ನೀಡಲಾಗಿತ್ತು.

ಡಿಎಸ್‌ಇಆರ್‌ಟಿ ತನ್ನ ವಿಷಯ ತಜ್ಞರ ಸಮಿತಿಯ ಮೂಲಕ ಪಠ್ಯ ಕಡಿತ ಬಹುತೇಕ ಪೂರ್ಣಗೊಳಿಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಿದೆ.

RELATED ARTICLES  ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ ಬಂದ್‌

ಅಲ್ಲಿಂದ ಈ ತಿಂಗಳ ಅಂತ್ಯದೊಳಗೆ ಪೂರ್ಣ ವರದಿ ಸರಕಾರಕ್ಕೆ ಸಲ್ಲಿಕೆಯಾಗಲಿದೆ.

ಪಠ್ಯ ಕಡಿತ ಹೇಗೆ?
ಒಂದರಿಂದ 10ನೇ ತರಗತಿವರೆಗೆ ಪಠ್ಯದಲ್ಲಿ ಕಡಿತ ಮಾಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಪಠ್ಯ ಕ್ರಮದ ಕೆಲವು ವಿಷಯಗಳಿಗೆ ಸಂಬಂಧಿಸಿ ಎನ್‌ಸಿಇಆರ್‌ಟಿ ಸೂಚನೆ ಅನುಸರಿಸಲಾಗುತ್ತದೆ. ರಾಜ್ಯ ಪಠ್ಯಕ್ರಮದ ವಿಷಯಗಳ ಪಠ್ಯ ಕಡಿತವನ್ನು ಡಿಎಸ್‌ಇಆರ್‌ಟಿ ಮಾಡಲಿದೆ.

ವ್ಯಾಕರಣ, ಅಕ್ಷರಮಾಲೆ ಮತ್ತು ಶಿಕ್ಷಣದ ಮೂಲ ತತ್ವಗಳು ಹಾಗೂ ಕಲಿಸಲೇಬೇಕಾದ ಅಗತ್ಯ ವಿಷಯಗಳನ್ನು ಹೊರತುಪಡಿಸಿ, ಉಳಿದ ಅಂಶಗಳನ್ನು ಕ್ರೋಡೀಕರಿಸಿ, ಉಳಿಸಿಕೊಳ್ಳಲೇಬೇಕಾದವು ಮತ್ತು ತೆಗೆಯಬಹುದಾದುವನ್ನು ವಿಂಗಡಿಸಿ, ಒಂದು ವರ್ಷ ಬೋಧನೆ ಮಾಡದಿದ್ದರೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕುಂದಾಗದ ಅಂಶಗಳನ್ನು ಮಾತ್ರ ತೆಗೆಯಲಾಗುತ್ತದೆ ಎಂದು ಡಿಎಸ್‌ಇಆರ್‌ಟಿ ಅಧಿಕಾರಿಯೊಬ್ಬರು ವಿವರ ನೀಡಿದರು. ಪಠ್ಯ ಕಡಿತ ಪೂರ್ಣವಾಗಿದೆ. ಕಡಿತ ಮತ್ತು ಉಳಿಸಿದ ಪಠ್ಯದ ಸಮಗ್ರ ಮಾಹಿತಿಯನ್ನು ಸರಕಾರ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಹೆಲ್ತ್ ಬುಲೆಟಿನ್

ಪುಸ್ತಕದಲ್ಲಿ ಬದಲಾವಣೆಯಿಲ್ಲ
2020-21ನೇ ಸಾಲಿಗೆ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕ ಮುದ್ರಣ ಮತ್ತು ಸರಬರಾಜು ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಪ್ರತ್ಯೇಕ ಪುಸ್ತಕ ಇರುವುದಿಲ್ಲ. ಯಾವುದೆಲ್ಲ ಕಡಿತವಾಗಿದೆ, ಯಾವುದನ್ನೆಲ್ಲ ಬೋಧಿಸಬೇಕಿಲ್ಲ ಎಂಬ ಆದೇಶ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಖಚಿತಪಡಿಸಿದ್ದಾರೆ.