ನ್ಯೂಯಾರ್ಕ್: ನೀವು ಕಟ್ಟಾ ಫೇಸ್ ಬುಕ್ ಬಳಕೆದಾರರಾಗಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಫೇಸ್ ಬುಕ್ ಬಳಸುತ್ತಿದ್ದರೆ ಹೆಚ್ಚು ಕಾಲ ಬದುಕುತ್ತೀರಿ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ವ್ಯಕ್ತಿಯ ವಾಸ್ತವ ಪ್ರಪಂಚದ ಸಾಮಾಜಿಕ ಸಂಬಂಧವನ್ನು ನಿರ್ವಹಿಸಿ ಅದನ್ನು ಇನ್ನಷ್ಟು ವಿಸ್ತರಿಸುವ ಕೆಲಸವನ್ನು ಫೇಸ್ ಬುಕ್ ಮಾಡುತ್ತದೆ.
ಫೇಸ್ ಬುಕ್ ನ್ನು ಮಿತಿಯಲ್ಲಿ ಬಳಸುತ್ತಿದ್ದರೆ ಸಾವಿನ ಪ್ರಮಾಣ ಕಡಿಮೆ ಎನ್ನುತ್ತಾರೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಜೇಮ್ಸ್ ಫೌಲರ್. 12 ದಶಲಕ್ಷ ಫೇಸ್ ಬುಕ್ ಬಳಕೆದಾರರ ಮೇಲೆ 6 ತಿಂಗಳ ಕಾಲ ನಡೆಸಿದ ಅಧ್ಯಯನದಿಂದ ಈ ಅಂಶ ಗೊತ್ತಾಗಿದೆ.
ಆನ್ ಲೈನ್ ಚಟುವಟಿಕೆ ಸಹಜವಾಗಿ ಸಾಮಾನ್ಯವಾಗಿದ್ದು, ಆಫ್ ಲೈನ್ ನಲ್ಲಿ ಪರಸ್ಪರ ಉತ್ತಮ, ಆರೋಗ್ಯಕರ ಸಂವಹನವಿದ್ದರೆ ಫೇಸ್ ಬುಕ್ ಬಳಕೆ ಉತ್ತಮ.
ಫೇಸ್ ಬುಕ್ ನಲ್ಲಿ ಮಿತಿಗಿಂತ ಜಾಸ್ತಿ ಹೊತ್ತು ಕಳೆಯುತ್ತಿದ್ದರೆ, ಹೊರ ಜಗತ್ತಿನ ಸಂಪರ್ಕವಿಲ್ಲದಿದ್ದರೆ ಮಾತ್ರ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದ ಪೋಸ್ಟ್ಡಾಕ್ಟೊರಲ್ ವಿಲಿಯಮ್ ಹಾಬ್ಸ್ ಹೇಳುತ್ತಾರೆ.
ಅದಲ್ಲದೆ ಫೇಸ್ ಬುಕ್ ನಲ್ಲಿ ಹೆಚ್ಚು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವವರು ಕೂಡ ಹೆಚ್ಚು ಸಮಯ ಬದುಕುತ್ತಾರಂತೆ. ಸಾಮಾಜಿಕ ಜಾಲತಾಣವನ್ನು ಬಳಸುವವರ ಸಾವಿನ ಪ್ರಮಾಣ ಇತರರಿಗಿಂತ ಶೇಕಡಾ 12ರಷ್ಟು ಕಡಿಮೆ.
1945ರಿಂದ 1989ರ ಮಧ್ಯೆ ಹುಟ್ಟಿದ ಸಮಾನ ವಯಸ್ಸು ಮತ್ತು ಸಮಾನ ಲಿಂಗದ ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಪ್ರಿಸೀಡಿಂಗ್ಸ್ ಆಫ್ ದ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್(ಪಿಎನ್ಎಎಸ್) ನಲ್ಲಿ ಅಧ್ಯಯನ ಪ್ರಕಟಗೊಂಡಿದೆ.