ಕಾರವಾರ: ಜಿಲ್ಲೆಯಾದ್ಯಂತ ಗಣೇಶ ಚತುರ್ಥಿಯ ಆಚರಣೆ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು. ವಿವಿಧೆಡೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನವನವೀನ ಭಂಗಿಯಲ್ಲಿನ ಬೃಹತ್ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಶೃದ್ಧಾ, ಭಕ್ತಿಯಿಂದ ಪೂಜಿಸಿದರು.

ಅನೇಕರು ಸಾಂಪ್ರದಾಯಿಕ ವಾದ್ಯ, ಸಂಗೀತ ಹಾಗೂ ಪಟಾಕಿ ಸಿಡಿಸಿ ಗಣೇಶನನ್ನು ಬರಮಾಡಿಕೊಂಡರು. ವಿವಿಧ ಹೂವು, ವಿದ್ಯುತ್ ಬೆಳಕಿನಿಂದ ಅಲಂಕರಿಸಿದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಂಬೋದರನಿಗೆ ಪ್ರಿಯವಾದ ಕಡಬು, ಪಂಚ ಕಜ್ಜಾಯ, ಮೋದಕ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಸಮರ್ಪಿಸಿದರು. ಹಿರಿಯರು ಕಿರಯರೆನ್ನದೇ ಎಲ್ಲ ವಯೋಮಾನದವರು ಹೊಸ ಬಟ್ಟೆ ತೊಟ್ಟು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.

RELATED ARTICLES  ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗಾಗಿ ಸೇವೆಯಲ್ಲಿದ್ದ ಸಂಚಾರಿ ಆರೋಗ್ಯ ಘಟಕಗಳಿಗೆ ಅನುದಾನದ ಬಿಡುಗಡೆಗೆ ಪ್ರಯತ್ನಿಸಲಾಗುವುದು: ಶಾಸಕ ದಿನಕರ ಶೆಟ್ಟಿ.

ಸಾಮಾನ್ಯವಾಗಿ ವಿವಿಧೆಡೆ ಒಂದೂವರೆ ದಿನ, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳವರೆಗೆ ಗಣೇಶನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಅನಂತ ಚತುದರ್ಶಿ ತನಕ ಪೂಜಿಸುವ ವಾಡಿಕೆ ಇದೆ. ಒಂದೂವರೆ ದಿನ ಪೂಜಿಸಿದ ಕೆಲ ಮಣ್ಣಿನ ಗಣಪತಿಯ ವಿಗ್ರಹವನ್ನು ಶನಿವಾರ ವಿಸರ್ಜಿಸಲಾಯಿತು. ‘ಗಣಪತಿ ಬಪ್ಪಾ ಮೋರಯಾ!’ ಎಂಬ ಮುಗಿಲು ಮುಟ್ಟುವ ಭಕ್ತರ ಘೋಷ ವಾಕ್ಯದೊಂದಿಗೆ ಕೆರೆ, ಬಾವಿ, ಸಮುದ್ರದಲ್ಲಿ ಮೂರ್ತಿಯನ್ನು ವಿಸರ್ಜಿಸಿ ವಿದಾಯ ಹೇಳಿದರು.

ಕಾರವಾರದಲ್ಲಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ, ಕೋಡಿಬಾಗ, ಕಾಜುಬಾಗ, ಸುಂಕೇರಿ, ನಗರಸಭೆ, ಪೊಲೀಸ್ ಠಾಣೆಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಬೃಹತ್‌ ಹಾಗೂ ವಿಭಿನ್ನವಾದ ಗಣೇಶ ಮೂರ್ತಿಗಳ ದರ್ಶನವನ್ನು ಭಕ್ತರು ಪಡೆದರು.

RELATED ARTICLES  'ಸಹೃದಯಿ' ಪುಸ್ತಕ ಲೋಕಾರ್ಪಣೆ ಸಮಾರಂಭ ಇಂದು

ಶ್ರೀಕ್ಷೇತ್ರಗಳಲ್ಲಿ ವಿಶೇಷ ಪೂಜೆ:

ಶ್ರೀಕ್ಷೇತ್ರಗಳಾದ ಗೋಕರ್ಣದ ಮಹಾಗಣಪತಿ, ಹೊನ್ನಾವರ ತಾಲ್ಲೂಕಿನ ಇಡಗುಂಜಿ ಹಾಗೂ ಪ್ರಸಿದ್ಧ ಗಣೇಶ ದೇವಾಲಯಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ವಿಶೇಷ ಅಭಿಷೇಕ, ಪೂಜಾ ಕಾರ್ಯಗಳು ನಡೆದವು. ಭಾದ್ರಪದ ಮಾಸದ ಶುಕ್ಲಪಕ್ಷದಂದು ಗಣೇಶನಿಗೆ ಹರಕೆ ಹೊರುವುದರಿಂದ ಹಾಗೂ ದರ್ಶನ ಪಡೆಯುವುದರಿಂದ ಎಲ್ಲ ಕಾರ್ಯಗಳು ಫಲಿಸುತ್ತದೆ, ಶುಭವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ನಮಿಸಿದರು.